ರೈತರು ಹಕ್ಕು ಪಡೆಯಲು ಸಂಘಟಿತರಾಗಿ

IMG-20230807-WA0023
Published on

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುನೇಗೌಡ ಸಲಹೆ

 ಚನ್ನಪಟ್ಟಣ
ರೈತರು ಹಕ್ಕುಗಳನ್ನು ಪಡೆದುಕೊಳ್ಳಲು ಸಂಟಿತರಾಗುವುದು ಉತ್ತಮ ಬೆಳವಣಿಗೆ. ರೈತರ ಅಭ್ಯುದಯಕ್ಕೆ ಸರ್ವ ರೀತಿಯ ಸಹಕಾರ ನೀಡುವುದಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುನೇಗೌಡ ತಿಳಿಸಿದರು.

ತಾಲೂಕಿನ ಗಾಂಧಿ ಭವನದ ಸಮೀಪ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿರಿಯ ರೈತ ಹೋರಾಟಗಾರ ದಿ. ಲಕ್ಷ್ಮಣ ಸ್ವಾಮಿ ಹಾಗೂ ಚಲುವಯ್ಯ ಅವರ ಸ್ಮರಣೋತ್ಸವ ಮತ್ತು ನೂತನ ಗೊನೆಕಾರರ ಸಂಘ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ರೈತ ಪರ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿದ್ದ ಲಕ್ಷ್ಮಣ ಸ್ವಾಮಿ ಅವರ ರೈತ ಕಾಳಜಿಗೆ ಸರಿಸಾಟಿ ಇಲ್ಲ. ರೈತ ಸಮಸ್ಯೆಗೆ ದನಿಯಾಗುವ ಜತೆಗೆ, ಇಲಾಖೆಗಳಿಗೂ ಮಾರ್ಗದರ್ಶಕರಾಗಿದ್ದರು. ಅವರ ದೇಹ ಮಾತ್ರ ನಮ್ಮಿಂದ ದೂರವಾಗಿದೆ. ಆದರೆ, ಅವರ ಹೋರಾಟ ಹಾಗೂ ನೆನಪುಗಳು ಸದಾ ನಮ್ಮ ಜತೆ ಇರಲಿವೆ. ಆಗಲಿದ ಚೇತನಗಳ ಸ್ಮರಣೆಯ ಜತೆಗೆ ಅವರು, ನಡೆದ ಹಾದಿಯಲ್ಲೆ ಸಂಘಟನೆ ಸಾಗಲಿ ಎಂದರು.

ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಂಟನೆಯ ಕಾರ್ಯಕರ್ತರು ಮಾಡಲಿ. ಸರ್ಕಾರದ ಯೋಜನೆಗಳು ಅರ್ಹ ರೈತರಿಗೆ ತಲುಪಿದಾಗ ಮಾತ್ರ ಯೋಜನೆಯ ಉದ್ದೇಶಗಳು ಸಾರ್ಥಕವಾಗುತ್ತವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಸೀಬನಕಟ್ಟೆ ಕೃಷ್ಣಪ್ಪ ಮಾತನಾಡಿ, ನಮ್ಮ ಸಂಘಟನೆಗೆ ಲಕ್ಷ್ಮಣ ಸ್ವಾಮಿ ಹಾಗೂ ಚಲುವಯ್ಯ ಅವರು ಎರಡು ನಕ್ಷತ್ರಗಳು. ಇವರಿಬ್ಬರನ್ನು ಕಳೆದುಕೊಂಡಿರುವುದು ನಮ್ಮ ಪಾಲಿಗೆ ತುಂಬಲಾರದ ನಷ್ಟ. ಸಿಡಿಲ ಧ್ವನಿಯ ಹೋರಾಟಗಾರ ಲಕ್ಷ್ಮಣ ಸ್ವಾಮಿ, ರೈತ ವಿರೋಧಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು ಎಂದರು.

ಅಗಲಿದ ರೈತ ನಾಯಕರಾದ ಲಕ್ಷ್ಮಣ ಸ್ವಾಮಿ ಮತ್ತು ಚಲುವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಘದ ಗೌರವಾಧ್ಯ ಕನಕಪುರ ನಾರಾಯಣಸ್ವಾಮಿ, ಮುಖಂಡರಾದ ಎಂ.ಪಿ.ವಿಶ್ವನಾಥ್​, ದುಂಡಯ್ಯ, ನಲ್ಲಹಳ್ಳಿ ಶ್ರೀನಿವಾಸ್​, ಶಿವರಾಜು ಕೆಬ್ಬಳ್ಳಿ, ಪಾದ್ರಳ್ಳಿ ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net