

ಚನ್ನಪಟ್ಟಣ
ತಾಲೂಕಿನಲ್ಲಿ ಕಾಡಾನೆಗಳ ಉಪಟಳಕ್ಕೆ ಅಂತ್ಯವೇ ಇಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟುದಿನ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ಇದೀಗ, ನಗರದ ಸಮೀಪಕ್ಕೂ ಲಗ್ಗೆ ಇಡುತ್ತಿರುವುದು ಜನತೆಯ ಆತಂಕ ಹೆಚ್ಚಿಸಿದೆ.
ಹೌದು.., ಬೊಂಬೆನಾಡು ಚನ್ನಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕಾಡಾನೆಗಳ ದಾಳಿ ಶಾಶ್ವತ ಸಮಸ್ಯೆಯಂತೆ ಕಾಡುತ್ತಿದೆ. ಕಾಡಂಚಿನ ಗ್ರಾಮಗಳಲ್ಲಂತೂ ಗಜಪಡೆಯ ಅಟ್ಟಹಾಸ ಮುಗಿಲುಮುಟ್ಟಿದೆ. ಆನೆದಾಳಿ ಬಾಧಿತ ಗ್ರಾಮಗಳ ರೈತರು ಗಜಪಡೆ ಉಪಟಳದಿಂದ ಹೈರಾಣಾಗಿದ್ದಾರೆ. ಪದೇಪದೆ ನಾಡಿನತ್ತ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಕಾಡಾನೆಗಳು ಅರಣ್ಯ ಇಲಾಖೆ ಹಾಗೂ ರೈತರ ನೆಮ್ಮದಿ ಕಸಿದುಕೊಂಡಿವೆ. ಕೆಲವೆಡೆ ಪ್ರಾಣಹಾನಿಗೂ ಕಾರಣವಾಗಿರುವ ಕಾಡಾನೆಗಳು ಜನತೆಗೆ ದಿಗಿಲು ಮೂಡಿಸಿವೆ.
ನಗರದ ಸಮೀಪಕ್ಕೂ ಲಗ್ಗೆ!
ಇತ್ತೀಚಿನ ದಿನಗಳಲ್ಲಿ ನಗರದ ಸಮೀಪಕ್ಕೂ ಕಾಡಾನೆಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಅಸುಪಾಸು ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು, ನಗರದೊಳಗೆ ನುಗ್ಗಿದರೆ ಗತಿಯೇನು ಎಂಬ ಭಯ ಆವರಿಸಿದೆ. ಬುಧವಾರ ಮುಂಜಾನೆ ನಗರದ ಅಪ್ಪಗೆರೆ ಬಳಿ ಇರುವ ಕಟ್ಟೆಯೊಂದರಲ್ಲಿ ಐದು ಕಾಡಾನೆಗಳು ಪ್ರತ್ಯಕ್ಷವಾಗಿರುವುದು ಇದಕ್ಕೆ ಸಾಕ್ಷಿಯಂತಿದೆ. ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳು ಕೂರಣಗೆರೆ, ಸಂಕಲಗೆರೆ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಿ, ಅಪ್ಪಗೆರೆ ಬಳಿ ಇರುವ ನರಸಯ್ಯನ ಕಟ್ಟೆಯಲ್ಲಿ ಬೀಡುಬಿಟ್ಟಿವೆ. ಬುಧವಾರ ಮುಂಜಾನೆ ಗಜಪಡೆಯ ಹಿಂಡನ್ನು ಕಂಡು ಜನತೆ ಹೌಹಾರಿದ್ದಾರೆ. ಮಂಗಳವಾರ ರಾತ್ರಿ ಆನೆಗಳು ಸಾಗಿ ಬಂದ ಹಾದಿಯುದ್ದಕ್ಕೂ ಅಪಾರ ಬೆಳೆಹಾನಿ ಮಾಡಿವೆ.
ಟೊಮ್ಯಾಟೊ ಬೆಳೆ ನಾಶ
ತಾಲೂಕಿನ ಸಂಕಲಗೆರೆ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಟೊಮ್ಯಾಟೊ ಬೆಳೆ ನಾಶಪಡಿಸಿವೆ. ಗ್ರಾಮದ ನಾಗಣ್ಣ ಎಂಬುವರು ಮೂರು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದರು. ಈಗಾಗಲೇ ಒಂದು ಬಾರಿ ಕಟಾವು ಮಾಡಿ ಮಾರಾಟ ಮಾಡಿದ್ದರು. ಇದೀಗ, ಮತ್ತೆ ಕಟಾವಿಗೆ ಸಿದ್ಧವಾಗಿದ್ದ ಟೊಮ್ಯಾಟೊ ಗಜಪಡೆ ಪಾಲಾಗಿದೆ. ಮಂಗಳವಾರ ರಾತ್ರಿ ದಾಳಿ ಮಾಡಿರುವ ಕಾಡಾನೆಗಳು ಅರ್ಧದಷ್ಟು ಬೆಳೆ ನಾಶಪಡಿಸಿವೆ.
ಈ ಭಾಗದಲ್ಲಿ ಕಾಡಾನೆಗಳ ದಾಳಿ ಇದೇ ಮೊದಲು ಎನ್ನಬಹುದಾಗಿದೆ. ಈ ಹಿಂದೆ ಒಂದು ಬಾರಿ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದವು. ಆದರೆ, ಬೆಳೆಹಾನಿ ಮಾಡಿರಲಿಲ್ಲ. ಆದರೆ, ಈಗ ಭರ್ಜರಿ ಲಾಭ ಕೊಡುತ್ತಿದ್ದ ಟೊಮ್ಯಾಟೊ ಬೆಳೆಯನ್ನು ಹಾಳು ಮಾಡಿದ್ದು, ಬೆಳೆಗಾರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅರಣ್ಯ ಇಲಾಖೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಕಲಗೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಬ್ಬಾಳು ಅರಣ್ಯ ಪ್ರದೇಶದಿಂದ ಈ ಆನೆಗಳು ಇತ್ತ ಬಂದಿವೆ. ನಗರಕ್ಕೆ ಹೊಂದಿಕೊಂಡಂತಿರುವ ಅಪ್ಪಗೆರೆ ಬಳಿಯ ಕಟ್ಟೆಯಲ್ಲಿ ಬೀಡುಬಿಟ್ಟಿವೆ. ಇವು ಅಲ್ಲಿಂದ ಕದಲದಂತೆ ಎಚ್ಚರವಹಿಸಿದ್ದೇವೆ. ಬುಧವಾರ ರಾತ್ರಿ ಆನೆಗಳನ್ನು ನರಿಕಲ್ಲು ಗುಡ್ಡದತ್ತ ಓಡಿಸಲು ಕಾರ್ಯಾಚರಣೆ ನಡೆಸಲಾಗುವುದು. ಹಗಲು ವೇಳೆಯಲ್ಲಿ ಕಾರ್ಯಾಚರಣೆ ಕಷ್ಟ. ಹೀಗಾಗಿ, ರಾತ್ರಿ ಕಾಡಿಗಟ್ಟುವ ಕೆಲಸ ಮಾಡಲಾಗುವುದು. ಜನತೆ ಆತಂಕಕ್ಕೆ ಒಳಗಾಗದೆ ಸಹಕರಿಸಬೇಕು.
ಎ.ಕಿರಣ್‌ಕುಮಾರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ