

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬಹುಮತದೊಂದಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಯ ಮೇಲೆ ಕಾರ್ಮೋಡ ಕವಿಯುವುದೇ? ಇಂತಹದೊಂದು ಪ್ರಶ್ನೆ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಜಿದ್ದಾಜಿದ್ದಿನಿಂದ ನಡೆದ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುನರಾಯ್ಕೆಯಾಗಿದ್ದಾರೆ. ಎರಡನೇ ಬಾರಿಗೆ ತಾಲೂಕಿನ ಜನರ ಪ್ರೀತಿ ಗಳಿಸುವಲ್ಲಿ ಸಫಲವಾಗಿರುವ ಅವರಿಗೆ ತಾಲೂಕಿನ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸವಾಲು ಎದುರಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರದ ಅಭಿವೃದ್ಧಿಗೆ ‘ಶಿವ-ರಾಮಯ್ಯ’ ಸರ್ಕಾರ ಸಾಥ್ ನೀಡುವುದೇ ಎಂಬ ಚರ್ಚೆ ಇದೀಗ ಶುರುವಾಗಿದೆ.
ಭರಪೂರ ಅನುದಾನ, ಸಮಸ್ಯೆಗಳಿಗೆ ಬರವಿಲ್ಲ!
ಕಳೆದ ಅವಧಿಯ ಕೈ-ತೆನೆ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರದಲ್ಲಿ ತಾಲೂಕಿಗೆ ಭರಪೂರ ಅನುದಾನ ಹರಿದಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ನೀಡಿದ್ದರು. ಜತೆಗೆ ಬಿಜೆಪಿ ಅಧಿಕಾರವಿದ್ದಾಗಲೂ ವಿಶೇಷ ಅನುದಾನ ತರುವಲ್ಲಿ ಸಫಲರಾಗಿದ್ದರು. ಇವರೊಂದಿಗೆ, ಮೇಲ್ಮನೆ ಸದಸ್ಯ ಸಿ.ಪಿ. ಯೋಗೇಶ್ವರ್ ಸಹ ಪ್ರಭಾವ ಬಳಸಿ ಕೆಲ ಅನುದಾನ ತಂದ ಕಾರಣ, ಬೊಂಬೆನಾಡು ಕಳೆದ ಅವಧಿಯಲ್ಲಿ ಸಾಕಷ್ಟು ಅನುದಾನ ಕಂಡಿತ್ತು. ಇಷ್ಟೆಲ್ಲ ಅನುದಾನ ಕಂಡ ತಾಲೂಕಿನಲ್ಲಿ ಇಂದಿಗೂ ಹಲವು ಸಮಸ್ಯೆಗಳಿದ್ದು, ಈ ಸರ್ಕಾರದಲ್ಲಿ ಆ ಸಮಸ್ಯೆಗಳ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ಕಸದ್ದೇ ಸಮಸ್ಯೆ
ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಕಸ ವಿಲೇವಾರಿಗೆ ಜಾಗ ಇಲ್ಲದಂತಾಗಿದೆ. ನಗರದ ಎಲೆಕೇರಿ ರೈಲ್ವೆ ಮೇಲ್ಸೇತುವೆ, ಯುಜಿಡಿ ಕಾಮಗಾರಿ, ಖಾಸಗಿ ಬಸ್ ನಿಲ್ದಾಣ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ, ಅಂಬೇಡ್ಕರ್ ಭವನ ಪೂರ್ಣಗೊಳಿಸುವುದೂ ಸೇರಿ ಹಲವು ಹಳೆಯ ಸಮಸ್ಯೆಗಳು ಬಗೆಹರಿಯಬೇಕಿದೆ. ಜನರ ಆಶಯದಂತೆ ನಗರವಾಸಿಗಳ ಅನುಕೂಲಕ್ಕಾಗಿ ಉದ್ಯಾನವನ, ಕ್ರೀಡಾಂಗಣ ಮಾಡಿಕೊಡುವ ಜವಾಬ್ದಾರಿ ಸಹ ಕುಮಾರಸ್ವಾಮಿ ಮೇಲಿದೆ. ನೂತನ ಸರ್ಕಾರದ ಮೇಲೆ ಒತ್ತಡ ತಂದು ನಗರದ ಸಿಲ್ಕ್ ಫಾರಂ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ರೇಷ್ಮೆಮಾರುಕಟ್ಟೆ, ತಾವೂ ಸಿಎಂ ಆಗಿದ್ದಾಗ ಘೋಷಿಸಿದ್ದ ತಾಲೂಕಿನ ಕಣ್ವ ಬಳಿ ಮಕ್ಕಳ ಉದ್ಯಾನ ನಿರ್ಮಾಣ, ಸತ್ತೇಗಾಲ ಯೋಜನೆ ಪೂರ್ಣಗೊಳಿಸುವುದು, ಮಾವು ಸಂಸ್ಕರಣಾ ಘಟಕದ ಶೀಘ್ರ ಕಾರ್ಯಾರಂಭಕ್ಕೆ ಕ್ರಮ ಸೇರಿ ಸಾಕಷ್ಟು ಸವಾಲುಗಳು ಕುಮಾರಸ್ವಾಮಿ ಅವರ ಮುಂದಿವೆ. ಇಷ್ಟೆಲ್ಲ ಕೆಲಸಗಳು ಕೈ ಸರ್ಕಾರದ ಅವಧಿಯಲ್ಲಿ ಜಾರಿಯಾಗುವುದೇ ಎಂಬುದೇ ಚರ್ಚೆಗೆ ಕಾರಣವಾಗಿದೆ.
ಕೈಕಟ್ಟಿ ನಿಲ್ಲುವುದಿಲ್ಲ!
ಇತ್ತೀಚೆಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತಾಲೂಕಿಗೆ ಆಗಮಿಸಿದ್ದ ಕುಮಾರಸ್ವಾಮಿ, ಈ ಸರ್ಕಾರದಿಂದ ತಾಲೂಕಿನ ಅಭಿವೃದ್ಧಿ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಾನು ಅವರ ಮುಂದೆ ಕೈಕಟ್ಟಿ ನಿಲ್ಲುವುದಿಲ್ಲ ಎಂದಿದ್ದರು. ಈ ಒಂದು ಹೇಳಿಕೆ ತಾಲೂಕಿನ ಅಭಿವೃದ್ಧಿಯ ಮೇಲಿನ ಕಾರ್ಮೋಡಕ್ಕೆ ಸಣ್ಣ ಉದಾಹರಣೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೇಳಿಕೇಳಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧ ಚೆನ್ನಾಗಿಲ್ಲ, ಅವರ ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನ ಬರುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಕೊನೇ ಪಕ್ಷ ಬಿಜೆಪಿ ಸರ್ಕಾರ ಇದ್ದಿದ್ದರೆ ಯೋಗೇಶ್ವರ್ ಅವರಾದರೂ ಅನುದಾನ ತರುತ್ತಿದ್ದರು. ಇದೀಗ, ಇಬ್ಬರ ಕಡೆಯಿಂದಲೂ ತಾಲೂಕಿಗೆ ವಿಶೇಷ ಅನುದಾನಗಳು ಬರುವುದು ಕಷ್ಟ ಸಾಧ್ಯ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಆದರೆ, ಇದನ್ನು ಖಡಾಖಂಡಿತವಾಗಿ ನಿರಾಕರಿಸುವ ಕಾಂಗ್ರೆಸಿಗರು, ನಮ್ಮ ಸರ್ಕಾರ ನಮ್ಮ ತಾಲೂಕನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಾಯಕರಾದ ಡಿಕೆ ಸಹೋದರರು ತಾಲೂಕನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡ್ಯೊಯುತ್ತಾರೆ ಎಂದು ವಾದ ಮಂಡಿಸುತ್ತಿದ್ದಾರೆ.