

ಚನ್ನಪಟ್ಟಣ
ವರ್ತಕರಿಗೆ ಪ್ಲಾಸ್ಟಿಕ್ ಬಳಸಬಾರದು ಎಂಬ ನೀತಿ ಬೋಧನೆ ಮಾಡಿ, ಅವರ ಬಳಿಯಿದ್ದ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದ ನಗರಸಭೆ ಅಧಿಕಾರಿಗಳ ವಿರುದ್ಧವೇ ವಶಪಡಿಸಿಕೊಂಡಿದ್ದ ಪ್ಲಾಸ್ಟಿಕ್ ಅಕ್ರಮ ಮಾರಾಟ ಯತ್ನದ ಆರೋಪ ಕೇಳಿಬಂದಿದೆ.
ಪ್ಲಾಸ್ಟಿಕ್ ನಿಷೇಧವಿರುವ ಕಾರಣ, ನಗರಸಭೆ ಅಧಿಕಾರಿಗಳು ಹಲವಾರು ತಿಂಗಳಿಂದ ನಗರದ ಅಂಗಡಿ ಮಳಿಗೆಗಳ ಮೇಲೆ ನಿರಂತರ ದಾಳಿ ನಡೆಸಿ ಅಪಾರ ಪ್ರಮಾಣದ ಪ್ಲಾಸ್ಟಿಕ್ (ಕವರ್ ಸೇರಿ ಇತರ ವಸ್ತುಗಳು) ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಹೀಗೆ, ವಶಪಡಿಸಿಕೊಂಡಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆಯ ಕೊಠಡಿಯೊಂದರಲ್ಲಿ ದಾಸ್ತಾನು ಮಾಡಲಾಗಿತ್ತು. ಆದರೆ, ಈ ಪ್ಲಾಸ್ಟಿಕ್ ವಸ್ತುಗಳನ್ನು ಕೆಲ ಅಧಿಕಾರಿಗಳು ನಿಯಮಬಾಹಿರವಾಗಿ ಮಾರಾಟ ಮಾಡಲು ಯತ್ನಿಸಿದ್ದಾರೆ, ಕೊಠಡಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಲಾರಿಯೊಂದಕ್ಕೆ ಲೋಡ್ ಮಾಡುತ್ತಿರುವುದು ಕೆಲ ನಗರಸಭೆ ಸದಸ್ಯರ ಗಮನಕ್ಕೆ ಬಂದು ಪ್ರಶ್ನಿಸಿದಾಗ ಮಾರಾಟಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.
ಮಾರಾಟಕ್ಕೆ ಯತ್ನಿಸಿದರೇ ಪರಿಸರ ಅಭಿಯಂತರು?
ನಗರಸಭೆ ವಶಪಡಿಸಿಕೊಂಡಿರುವ ಪ್ಲಾಸ್ಟಿಕ್ ಮರುಬಳಕೆ ನಿಷಿದ್ಧವಿದ್ದು, ಇದನ್ನು ಪರಿಸರ ನಿಯಂತ್ರಣ ಮಂಡಳಿ ಒಪ್ಪಿಗೆ ಪಡೆದು, ಪ್ಲಾಸ್ಟಿಕ್ ವಸ್ತುಗಳನ್ನು ತುಂಡರಿಸಿ ವಿಲೇವಾರಿ ಮಾಡುವ ನಿಯಮವಿದೆ. ಆದರೆ, ನಗರಸಭೆ ವಶದಲ್ಲಿದ್ದ ಪ್ಲಾಸ್ಟಿಕ್ ಅನ್ನು ಪೌರಾಯುಕ್ತರ ಗಮನಕ್ಕೂ ತಾರದೇ ನಗರಸಭೆ ಪರಿಸರ ಅಭಿಯಂತ ಮೀನಾಕ್ಷಿ ಸೇರಿ ಆರೋಗ್ಯ ಶಾಖೆಯ ಕೆಲ ಸಿಬ್ಬಂದಿ ಖಾಸಗಿ ವ್ಯಕ್ತಿಗೆ ಶನಿವಾರ ಮಾರಾಟ ಮಾಡುತ್ತಿದ್ದರು. ಲಾರಿಯೊಂದನ್ನು ಕರೆಸಿ, ಯಥಾಸ್ಥಿತಿಯಲ್ಲಿದ್ದ ಪ್ಲಾಸ್ಟಿಕ್ ಲೋಡ್ ಮಾಡಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಕೆಲ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಚಾರ ತಿಳಿದ ಪೌರಾಯುಕ್ತ ಪುಟ್ಟಸ್ವಾಮಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ಅನ್ಲೋಡ್ ಮಾಡಲಾಗಿದೆ.
ಬಾಡಿಗೆಗಾಗಿ ಲಾರಿ ಮಾಲೀಕನ ಪ್ರತಿಭಟನೆ
ಇದರೊಂದಿಗೆ, ಶನಿವಾರ ಬಾಡಿಗೆಗೆ ಬಂದ ಲಾರಿಯನ್ನು ಕೆಲ ನಗರಸಭೆ ಸದಸ್ಯರು ಆವರಣದಲ್ಲಿಯೇ ತಡೆದು ನಿಲ್ಲಿಸಿದ್ದಾರೆ. ಈ ಮಧ್ಯೆ ಸೋಮವಾರ ಲಾರಿ ಮಾಲೀಕ, ನಗರಸಭೆ ಅಧಿಕಾರಿಗಳು ಬಾಡಿಗೆಗೆ ಕರೆದಿದ್ದು, ನನಗೆ ಮೂರು ದಿನದ ಬಾಡಿಗೆ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ಬಾಗಿಲಿಗೆ ಲಾರಿ ನಿಲ್ಲಿಸಿ ಪ್ರತಿಭಟಿಸಿದ ಪ್ರಸಂಗವೂ ಜರುಗಿದೆ. ಆರೋಪ ಹೊತ್ತಿರುವ ಪರಿಸರ ಅಭಿಯಂತ ಮೀನಾಕ್ಷಿ ಸೋಮವಾರ ರಜೆಯಲ್ಲಿದ್ದು, ಅವರು ಬಂದ ನಂತರ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೌರಾಯುಕ್ತ ಪುಟ್ಟಸ್ವಾಮಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪ್ಲಾಸ್ಟಿಕ್ ಲೋಡ್ ಹಾಗೂ ಅನ್ಲೋಡ್ ಮಾಡುತ್ತಿರುವ ಸಿಸಿ ಕ್ಯಾಮರಾ ದೃಶ್ಯಗಳು ಈಗ ವೈರಲ್ ಆಗಿವೆ.