

ಚನ್ನಪಟ್ಟಣ
ಕನ್ನಡ ಸಾಹಿತ್ಯ ಪರಿಷತ್ ಯಾರೊಬ್ಬರ ಸ್ವತ್ತಲ್ಲ. ಕಸಾಪ ಪದಾಧಿಕಾರಿಗಳ ಅಸಾಹಿತ್ಯಿಕ ಮನೋಭಾವ, ಬೇಜವಾಬ್ದಾರಿ ಹಾಗೂ ರಾಜಕಾರಣದಿಂದ ಪರಿಷತ್ ಹಾಳಾಗುತ್ತಿದೆ. ಚನ್ನಪಟ್ಟಣ ತಾಲೂಕು 6ನೇ ಸಾಹಿತ್ಯ ಸಮ್ಮೇಳನ ವಿಫಲಗೊಂಡಿದ್ದು ಇದೆ ಕಾರಣಕ್ಕೆ. ಈ ಹಿನ್ನೆಲೆಯಲ್ಲಿ ಇದರ ನೈತಿಕ ಹೊಣೆ ಹೊತ್ತು ಕಸಾಪ ಪದಾಧಿಕಾರಿಗಳು ಗೌರವಯುತವಾಗಿ ನಿರ್ಗಮಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ, ಚಿಂತಕ ನಾಗವಾರ ಶಿವರಾಮೇಗೌಡ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಕಸಾಪ ತಾಲೂಕು ಸಮ್ಮೇಳನ ಸಂಪೂರ್ಣ ವಿಫಲಗೊಂಡಿದೆ. ಸಮ್ಮೇಳನ ನಡೆಸಲು ತಾಲೂಕು ಕಸಾಪ ಅಧ್ಯಕ್ಷರು ಎಡವಿದ್ದಾರೆ. ಸಾಹಿತ್ಯ ಸಮ್ಮೇಳನ ಮತ್ತು ಕಸಾಪ ಕಾರ್ಯಕ್ರಮಗಳಿಗೆ ಜನ ಬರುವುದಿಲ್ಲ ಎನ್ನುವುದು ಕೇವಲ ನೆಪ. ಈ ಹಿಂದೆ ಕಸಾಪ ಕಾರ್ಯಕ್ರಮಗಳಿಗೆ ಜನ ಸೇರುತ್ತಿರಲಿಲ್ಲವೇ. ಸಮ್ಮೇಳನ ವಿಫಲಗೊಳ್ಳಲು ಆಯೋಜಕರ ಉಡಾೆಫೆ ಕಾರಣ. ನಾಲ್ಕುವರೆ ಸಾವಿರಕ್ಕೂ ಹೆಚ್ಚು ಸದಸ್ಯರಿರುವ ತಾಲೂಕು ಘಟಕದಲ್ಲಿ ಸಭಿಕರ ಕೊರತೆ ಯಾಕಾಗುತ್ತಿದೆ ಎನ್ನುವುದನ್ನು ತಾಲೂಕು ಕಸಾಪ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.
ಅನುದಾನ ಇಲ್ಲದ ಸಂದರ್ಭಗಳಲ್ಲೂ ಸಮ್ಮೇಳನಗಳು ಸಾಕಷ್ಟು ಯಶಸ್ವಿಯಾಗಿವೆ. ಈಗ ಸಮ್ಮೇಳನದ ಕಾರ್ಯಕ್ರಮಕ್ಕೆ ಸದಸ್ಯರಿಗಿರಲಿ, ಆಹ್ವಾನಿತರಿಗೂ ಕನಿಷ್ಠ ಆಹ್ವಾನ ನೀಡುತ್ತಿಲ್ಲ. ಸಮ್ಮೇಳನ, ದತ್ತಿ ಕಾರ್ಯಕ್ರಮಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಸಭೆಯಲ್ಲಿ ಕೂರಿಸಿಕೊಂಡು ಸಮ್ಮೇಳನಾಧ್ಯರ ಆಯ್ಕೆ ಮಾಡುತ್ತಾರೆ. ತಮ್ಮಲ್ಲೇ ಲೋಪಗಳನ್ನು ಇಟ್ಟುಕೊಂಡು ಜನ ಬರಲ್ಲ ಎಂದರೆ ಏನರ್ಥ. ಪರಿಷತ್ ಸಾರ್ವಜನಿಕ ಆಸ್ತಿ. ಕೂಡಲೇ ಕಸಾಪ ಪದಾಧಿಕಾರಿಗಳು ಸಾರ್ವಜನಿಕ ಲೆಕ್ಕಪತ್ರ ನೀಡಬೇಕು. ಗೋಷ್ಠಿ ಅಧ್ಯತೆ, ವಿಚಾರ ಮಂಡನೆ ಮಾಡುವವರೇ ಕಾರ್ಯಕ್ರಮಕ್ಕೆ ಬರೋಲ್ಲ ಎಂದರೆ ನಾಚಿಕೆಗೇಡು ಎಂದು ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಹಣ, ಪ್ರಚಾರ ಪ್ರಿಯರು ಬರಬಾರದು
ಕನ್ನಡ ಜನಶಕ್ತಿ ಕೇಂದ್ರದ ಅಧ್ಯ ಸಿ.ಕೆ.ರಾಮೇಗೌಡ ಮಾತನಾಡಿ, ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಯ ಆಗರವಾಗಿತ್ತು. ಪರಿಷತ್ನ ಕಾರ್ಯಕ್ರಮ ಎನಿಸಲಿಲ್ಲ. ಸಾಹಿತ್ಯಾಸಕ್ತರನ್ನು ಕಡೆಗಣಿಸಿ ನಡೆಸಿದ ಕಾರ್ಯಕ್ರಮವಾಗಿತ್ತು. ತಾಲೂಕು ಅಧ್ಯಕ್ಷರಾದವರಿಗೆ ಇಚ್ಛಾಶಕ್ತಿ ಇರಬೇಕು. ಕನಿಷ್ಠ ನೀರು ಕೊಡುವ ವ್ಯವಸ್ಥೆಯೂ ಇರಲಿಲ್ಲ. ಕಸಾಪ ಸಾಹಿತ್ಯೀಕರಣವಾಗಬೇಕೆ ಹೊರತು, ವಾಣಿಜ್ಯೀಕರಣ ಆಗಬಾರದು. ಹಣ ಮಾಡುವ ಅಥವಾ ಪ್ರಚಾರ ಪಡೆಯುವ ಹಂಬಲ ಇರುವವರು ಈ ಕ್ಷೇತ್ರಕ್ಕೆ ಬರಬಾರದು. ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಕಳೆದ ಬಾರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಅವರಿಗೆ ಪರಿಷತ್ ಕಾರ್ಯಗಳ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ದೂರಿದರು.
ಕರ್ತವ್ಯ ನಿರ್ವಹಿಸದ ಅಧ್ಯಕ್ಷರು
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕಾದದ್ದು ತಾಲೂಕು ಅಧ್ಯಕ್ಷರ ಕರ್ತವ್ಯ. ಅವರಿಗೆ ಮಾರ್ಗದರ್ಶನ ನೀಡಬೇಕಾದವರು ಜಿಲ್ಲಾಧ್ಯಕ್ಷರು. ಇವರಿಬ್ಬರೂ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಸಮ್ಮೇಳನ ಹಾಳಾಯಿತು. ಒಮ್ಮೆ ಅಧಿಕಾರ ಅನುಭವಿಸಿದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ನಮ್ಮ ತಾಲೂಕಿನವರು ಜಿಲ್ಲಾಧ್ಯಕ್ಷರಾಗಿದ್ದು, , ಬೇರೆ ತಾಲೂಕಿನವರಿಗೆ ಅವಕಾಶ ಮಾಡಿಕೊಡೋಣ ಎಂದು ಹೇಳಿದರೂ ಕೇಳಲಿಲ್ಲ. ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸಬೇಕು. ಆದರೆ, ಅದು ಆಗುತ್ತಿಲ್ಲ ಎಂದು ವಿಷಾದಿಸಿದರು.
ಸದಸ್ಯರು ಸತ್ತಿಲ್ಲ
ಕಸಾಪ ತಾಲೂಕು ಮಾಜಿ ಅಧ್ಯ ಎಂ.ಶಿವಮಾದು ಮಾತನಾಡಿ, ಇದೊಂದು ಕಾಟಾಚಾರದ ಸಮ್ಮೇಳನ. ಜಿಲ್ಲಾ, ತಾಲೂಕು ಕಸಾಪ ಯಾರಪ್ಪನ ಆಸ್ತಿಯಲ್ಲ. ಹಣ ಕೊಟ್ಟವರು, ಚುನಾವಣೆಗೆ ಸಹಾಯ ಮಾಡಿದವರನ್ನು ಕಾರ್ಯಕ್ರಮದಲ್ಲಿ ವೈಭವೀಕರಿಸಲಾಗುತ್ತಿದೆ. ಇದರಿಂದ ಪರಿಷತ್ ಹಾಳಾಗುತ್ತಿದೆ. ಸೌಜನ್ಯಕ್ಕಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸ್ಥಿತಿ ಇಲ್ಲ. ಜಿಲ್ಲಾ ಹಾಗೂ ತಾಲೂಕು ಕಸಾಪ ಸತ್ತು ಹೋಗಿದೆ. ಆದರೆ, ಪರಿಷತ್ ಸದಸ್ಯರು ಸತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.