

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನಗರದ ಚಾಮುಂಡೇಶ್ವರಿ ಮತ್ತು ಇತರ 7 ದೇವತೆಗಳ ಕರಗ ಮಹೋತ್ಸವ ಜು.4ರಿಂದ ನಡೆಯಲಿದೆ.
ಆಷಾಢಮಾಸ ಪ್ರಾರಂಭವಾಗುತ್ತಲೇ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ದೇವಾಲಯಗಳಲ್ಲೂ ಭರದ ಸಿದ್ಧತೆ ನಡೆಯುತ್ತಿದೆ. ವಿದ್ಯುತ್ ದೀಪಾಲಂಕಾರ, ತಳಿರು ತೋರಣ, ಹೂವಿನ ಅಲಂಕಾರಗಳಿಂದ ದೇವಾಲಯಗಳು, ಬೀದಿಗಳು ಕಂಗೊಳಿಸುತ್ತಿವೆ.
ಜನತೆ ನಗರ ದೇವತೆಗಳಾದ ಬನ್ನಿಮಹಾಂಕಾಳಿ, ಚಾಮುಂಡೇಶ್ವರಿ ಅಮ್ಮನವರನ್ನು ಭಕ್ತಿಯಿಂದ ಆರಾಧಿಸುತ್ತಾ ಬಂದಿದ್ದಾರೆ. ಎರಡು ದೇವರುಗಳ ಜತೆಗೆ ಏಳು ನಗರದ ಶಕ್ತಿದೇವತೆಗಳಿಗೆ ಕರಗ ಮಹೋತ್ಸವ ನಡೆಯುತ್ತದೆ.
ಪ್ರತಿವರ್ಷ ಆಷಾಢ ಮಾಸದ ಮೊದಲನೇ ವಾರ ಬನ್ನಿಮಹಾಂಕಾಳಿ, ಎರಡನೇ ವಾರ ಚಾಮುಂಡೇಶ್ವರಿ ಕರಗ ನಡೆಯುವುದು ವಾಡಿಕೆ. ಕಳೆದ ಮಂಗಳವಾರ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ನೆರವೇರಿತು. ಮಂಗಳವಾರ ರಾತ್ರಿ ಚಾಮುಂಡೇಶ್ವರಿ ಕರಗ ನಡೆಯಲಿದ್ದು, ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ನಗರದ ಇತರ ಶಕ್ತಿ ದೇವತೆಗಳ ತೋಪ್ಖಾನ್ ಮೊಹಲ್ಲಾ, ಮುತ್ತು ಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಶೆಟ್ಟಿಹಳ್ಳೀಬಿದಿ ಆದಿಶಕ್ತಿ, ಐಜೂರು ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಎಂಬ ಏಳು ಕರಗಗಳು ಮತ್ತು ಅಗ್ನಿಕೊಂಡ ಬುಧವಾರ ಬೆಳಗ್ಗೆ ನಡೆಯಲಿವೆ.
20 ವರ್ಷಗಳಿಂದ ಚಾಮುಂಡೇಶ್ವರಿ ಕರಗ ನಡೆಯುತ್ತಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಹಬ್ಬದ ದಿನಕ್ಕೆಂದೇ ವಿಶೇಷ ವೇದಿಕೆ ಸೃಷ್ಟಿಸಿ, ಖ್ಯಾತ ಚಲನಚಿತ್ರ ನಟ ನಟಿಯರು, ಹಾಡುಗಾರರು, ರಾಜಕೀಯ ಗಣ್ಯರು ಭಾಗವಹಿಸುತ್ತಾರೆ. ರಸಮಂಜರಿ, ಭಕ್ತಿ ಕಾರ್ಯಕ್ರಮಗಳನ್ನು ರಾತ್ರಿ ಹಮ್ಮಿಕೊಳ್ಳಲಾಗಿದೆ. ಜತೆಗೆ ನಗರದ ಆಯಾ ಪ್ರದೇಶದಲ್ಲೂ ಹಲವು ಕಾರ್ಯಕ್ರಮಗಳನ್ನು ಭಕ್ತರು ನಡೆಸುತ್ತಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷವಾಗಿ ಮನರಂಜನಾ ಆಟದ ಪರಿಕರಗಳನ್ನು ಜೋಡಿಸಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಬರುತ್ತಾರೆ. ನಗರವೇ ಮಂಗಳವಾರ ರಾತ್ರಿ ಜನ ಜಂಗುಳಿಯಿಂದ ತುಂಬಿ ಹೋಗಿರುತ್ತದೆ. ಪ್ರತಿ ಗಲ್ಲಿಗಲ್ಲಿಯೂ ಕರಗ ನಡೆಯುವ ಕಾರಣ ವಿಶೇಷವಾಗಿ ಕರಗ ಬರುವ ದಾರಿಯನ್ನು ಹೂಗಳಿಂದ ಅಲಂಕರಿಸಲಾಗುತ್ತದೆ.
ಕರಗ ಪೂಜಾರಿಗಳು
ಚಾಮುಂಡೇಶ್ವರಿ - ದೇವಿಪ್ರಸಾದ್ಸಿಂಗ್ (ಬಾಬು), ಬನ್ನಿಮಹಾಂಕಾಳಿ- ಆರ್.ಎನ್. ಯೋಗೇಶ್, ಐಜೂರು ಆದಿಶಕ್ತಿ - ವಿಜಯ್, ಬಾಲಗೇರಿ ಬಿಸಿಲು ಮಾರಮ್ಮ-ಪಿ.ಮಹೇಂದ್ರ, ಮಗ್ಗದಕೇರಿ ಮಾರಮ್ಮ- ಚೇತನ್, ಭಂಡಾರಮ್ಮ-ಎನ್. ಸಾಗರ್, ತೋಪ್ಖಾನ್ ಮೊಹಲ್ಲಾ ಮುತ್ತುಮಾರಮ್ಮ-ಎನ್. ಪ್ರಶಾಂತ್, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ-ಕೆ.ಅನಿಲ್ಕುಮಾರ್, ಕೊಂಕಾಣಿದೊಡ್ಡಿ ಆದಿಶಕ್ತಿ- ಎಚ್.ಮುನೀಂದ್ರ.
ನಗರದ ಭಕ್ತರು ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವವನ್ನು ಪ್ರತಿವರ್ಷ ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ. ನಮ್ಮ ತಂದೆ ಕೆ.ಪದ್ಮನಾಭಸಿಂಗ್ 38 ವರ್ಷ ಕರಗಧಾರಣೆ ಮಾಡಿದ್ದರು. 23 ವರ್ಷಗಳಿಂದ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಕರಗಧಾರಣೆ ಮಾಡುತ್ತಾ ಬಂದಿದ್ದೇನೆ.
ದೇವಿಪ್ರಸಾದ್ಸಿಂಗ್ (ಬಾಬು), ಚಾಮುಂಡೇಶ್ವರಿ ಕರಗ ಪೂಜಾರಿ.
ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ಇತರ 9 ಶಕ್ತಿ ದೇವತೆಗಳ ಕರಗ ನಗರಕ್ಕೆ ಕಳಸವಿದ್ದಂತೆ. ಜನತೆ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ. ನಗರದ ಧಾರ್ಮಿಕ ಕಾರ್ಯಕ್ರಮಗಳಿಂದ ಮೈಸೂರು ದಸರಾ ವೈಭವದಂತೆ ರಾಮನಗರದ ಕರಗದ ಹಬ್ಬಗಳು ಭಾಸವಾಗುತ್ತದೆ.
ಲಕ್ಷ್ಮಣ್ , ಗಣೇಶ್ ಜುವೆಲರಿ ಮಾಲೀಕ, ರಾಮನಗರ