

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಹೋಬಳಿಯ ಗುನ್ನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಉದ್ಘಾಟನೆಗೊಂಡು 4 ತಿಂಗಳು ಕಳೆದರೂ ವಸತಿ ಶಾಲೆ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮಾಡಿಲ್ಲ. ಇದನ್ನು ಪ್ರಶ್ನಿಸಿರುವ ಪಾಲಕರು ಮಕ್ಕಳ ಬಗ್ಗೆ ಇಲಾಖೆಗೆ ಕಾಳಜಿ ಇದೆಯೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗುನ್ನೂರು ಹೊರವಲಯದಲ್ಲಿ ಸುಮಾರು 9.38 ಎಕರೆ ಪ್ರದೇಶದಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ನಿಲಯ ನಿರ್ಮಾಣವಾಗಿದೆ. ಸುಮಾರು 250 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ವಸತಿ ಶಾಲೆ ಗ್ರಾಮದ ಹೊರಗಿದ್ದು, ಹಂದಿಗೊಂದಿ ಅರಣ್ಯ ಪ್ರದೇಶದ ಅಂಚಿನಲ್ಲಿದೆ. ಆನೆಗಳೂ ಆಗಿಂದಾಗ್ಗೆ ಅರಣ್ಯ ಪ್ರದೇಶಕ್ಕೆ ಬಂದು ಹೋಗುತ್ತವೆ. ಅರಣ್ಯ ಪ್ರದೇಶದ ಸಮೀಪದಲ್ಲೇ ವಸತಿ ನಿಲಯ ತಲೆ ಎತ್ತಿದೆ. ಶಾಲೆ ಮಾರ್ಚ್‌ನಲ್ಲಿ ಉದ್ಘಾಟನೆ ಕಂಡಿದ್ದು, ಸುಂದರ ಕಟ್ಟಡ ನಿರ್ಮಾಣ, ಸುತ್ತಲೂ ಹಚ್ಚ ಹಸಿರು ಪರಿಸರದಿಂದ ಕಂಗೊಳಿಸುತ್ತಿದೆ.
ಸುಸಜ್ಜಿತ ಶಾಲೆಗೆ ಮಕ್ಕಳ ಜಾಗ್ರತೆ, ಚಲನವಲನ, ಬಂದು ಹೋಗುವವರ, ಹೊರಗಿನವರ ಕುರಿತು ತಿಳಿಯಲು ವಸತಿ ಶಾಲೆಯಲ್ಲಿ ಎಲ್ಲೂ ಸಿಸಿ ಕ್ಯಾಮರಾಗಳು ಕಾಣ ಸಿಗುವುದಿಲ್ಲ. ಸುತ್ತಲೂ ಕಾಂಪೌಂಡ್ ಇದೆ. ಅಷ್ಟು ಸಾಕು ಎಂಬ ಮನಸ್ಥಿತಿ ಇಲ್ಲಿನ ಅಧಿಕಾರಿಗಳಲ್ಲಿ ಇರುವಂತಿದೆ.
ಮಕ್ಕಳ ಓದಿಗೆ ಅನುಕೂಲಕರವಾಗಿರುವ ಎರಡು ಅಂತಸ್ತಿನ ತರಗತಿ ಕೊಠಡಿಗಳು, ಸುಸಜ್ಜಿತ ಅಡುಗೆ ಮನೆ, ಭೋಜನಾಲಯ, ಪ್ರಾರಂಭದಲ್ಲೆ ಭದ್ರತಾ ಕೊಠಡಿ, ವಿಶಾಲ ಸಭಾಂಗಣ, ಮೂರು ಅಂತಸ್ತಿನ ಬಾಲಕರ, ಬಾಲಕಿಯರ ಪ್ರತ್ಯೇಕ ಕಟ್ಟಡಗಳು, ಶಿಕ್ಷಕರ ವಸತಿಗೆ 8 ಕೊಠಡಿಗಳು, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚ ಗೃಹ, ಸ್ನಾನಗೃಹಗಳು ನಿರ್ಮಾಣವಾಗಿವೆ.
ಗ್ರಾಮೀಣ ಪ್ರದೇಶದ ಜನರು ಉತ್ತಮ ವ್ಯಾಸಂಗ ಸಿಗುತ್ತದೆ ಎಂದು ಮಕ್ಕಳನ್ನು ದಾಖಲಿಸಿದ್ದಾರೆ. ವಿಶೇಷವಾಗಿ ಹೆಚ್ಚಿಗೆ ಹೆಣ್ಣು ಮಕ್ಕಳು ಇದ್ದಾರೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಇಂಥ ಕಾಲದಲ್ಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗದಿರುವುದು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ವಿಶಾಲ ಪ್ರದೇಶ, ಐದಾರು ಕಟ್ಟಡಗಳು, ವಸತಿ ನಿಲಯಗಳು, ಸ್ಥಳೀಯರ ಚಲನವಲನದ ಮೇಲೆ ನಿಗಾ ಇಡಲು ಮಕ್ಕಳ ಭದ್ರತೆ, ಅದರಲ್ಲೂ ಹೆಣ್ಣುಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಬೇಕು ಎನ್ನುತ್ತಾರೆ ಮಕ್ಕಳ ಪಾಲಕರಾದ ವೆಂಕಟಪ್ಪ, ಪುರುಷೋತ್ತಮ್, ಲೋಕೇಶ್, ಸುನಿತಾ, ವಿಶ್ವಣ್ಣ, ಶಿವಣ್ಣ, ರಾಜು ಮುಂತಾದವರು.
ವಸತಿ ಶಾಲೆ ಅರಣ್ಯದಂಚಿನಲ್ಲಿದೆ. ಆಗಾಗ ಇದೇ ಅರಣ್ಯದಲ್ಲಿ ಆನೆಗಳು ಓಡಾಟ ನಡೆಸುತ್ತವೆ. ಅಕ್ಕಪಕ್ಕ ಜನವಸತಿ ಪ್ರದೇಶ ಕೂಡ ಇಲ್ಲ. ರಾತ್ರಿ ವೇಳೆ ಹೆಚ್ಚಿನ ಸಿಬ್ಬಂದಿಯೂ ಇರುವುದಿಲ್ಲ. ಹೆಣ್ಣು, ಗಂಡು ಮಕ್ಕಳು ವಸತಿ ಇರುವ ಶಾಲೆಯಲ್ಲಿ ಸಿಸಿ ಕ್ಯಾಮರಾದ ಅವಶ್ಯಕತೆ ಇದೆ. ಉದ್ಘಾಟನೆ ಕಂಡು 4 ತಿಂಗಳಾದರೂ ಅಳವಡಿಸದೇ ಇರುವುದು ಮಕ್ಕಳ ಮೇಲೆ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಅಧಿಕಾರಿಗಳು ನಿದ್ರೆ ಮಂಪರಿನಲ್ಲಿ ಇದ್ದಾರೆಯೇ ಎಂದು ಅನಿಸುತ್ತಿದೆ.
ಜಯರಾಂ, ಮಕ್ಕಳ ಪಾಲಕ, ಲಕ್ಕಪ್ಪನಹಳ್ಳಿ
ನಾಲ್ಕು ದಿನಗಳ ಹಿಂದಷ್ಟೇ ವಸತಿ ನಿಲಯಕ್ಕೆ ಹೆಚ್ಚುವರಿ ಪ್ರಾಂಶುಪಾಲರನ್ನಾಗಿ ಇಲಾಖೆ ನೇಮಿಸಿದೆ. ಹಳೇ ಕಟ್ಟಡದಲ್ಲಿದ್ದ ಸಿಸಿ ಕ್ಯಾಮರಾ ಹೊಸ ಕಟ್ಟಡಕ್ಕೆ ಬಂದಿವೆ. ಆದರೆ, ಜೋಡಣೆ ಮಾಡಿಲ್ಲ. ವಾರದಲ್ಲಿ ಜೋಡಣೆ ಮಾಡಿ, ಹೆಚ್ಚಿಗೆ ಬೇಕಾದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವಶ್ಯಕತೆ ಇರುವ ಕಡೆ ಜೋಡಣೆ ಮಾಡಲಾಗುತ್ತದೆ. ಮಕ್ಕಳ ಜವಾಬ್ದಾರಿ ನಮ್ಮ ಮೇಲಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು.
ಹನುಮಂತಯ್ಯ, ಹೆಚ್ಚುವರಿ ಪ್ರಾಂಶುಪಾಲ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಗುನ್ನೂರು