ಪಶು ಆಹಾರ ದುಬಾರಿ, ಮೇವು ಕೊರತೆ ಹೈನುಗಾರಿಕೆ ನಂಬಿದವರ ಪಡಿಪಾಟಲು ಸರ್ಕಾರ ಕೈಹಿಡಿಯದಿದ್ದರೆ ಆರ್ಥಿಕ ಸಂಕಷ್ಟ

Rmgm-Ph-02-Dairy Halu Rate Mevu Korathe News Story-Photo-Mevu-Keetabade Jola Rmgm Taluk- 30-6-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಹೈನುಗಾರರಿಗೆ ಪಶು ಆಹಾರದ ಬೆಲೆ ಹೊರೆಯಾಗಿದ್ದರೆ, ಮಳೆ ಕೊರತೆ ಪರಿಣಾಮ ಹಸಿರು ಮೇವು ಕೀಟಬಾಧೆಗೆ ಸಿಲುಕಿ ಮೇವಿಗೂ ಪಡಿಪಾಟಲು ಪಡುವಂತಾಗಿದೆ.

ಮಕ್ಕಳ ಪಾಲನೆ, ಪೋಷಣೆ, ವಿದ್ಯಾಭ್ಯಾಸ, ಕೃಷಿ, ಔಷಧ ಖರ್ಚಿಗಾಗಿ ಬಹುತೇಕ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಪ್ರಸ್ತುತ ಸನ್ನಿವೇಶ ಹೈನುಗಾರರಿಗೆ ಕಹಿಯಾಗಿದ್ದು, ಹಿಂಡಿ, ಜೋಳ, ಬೂಸಾ, ಕಡ್ಲೆ ಹೊಟ್ಟು ಮತ್ತಿತರ ಆಹಾರದ ಬೆಲೆ ಕಳೆದ ತಿಂಗಳಿಂದ ದಿನೇದಿನೆ ಏರಿಕೆಯಾಗುತ್ತಿದೆ. ಜತೆಗೆ ಮಳೆ ಕೊರತೆ ಪರಿಣಾಮ ಹಸಿರು ಮೇವು, ಒಣ ಮೇವು ಸಿಗದಂತಾಗಿದೆ. ವೆಚ್ಚ ಅಧಿಕವಾದರೂ ದೂರದ ಪ್ರದೇಶಗಳಿಂದ ಮೇವು ಖರೀದಿಸಿ ತಂದು ಜಾನುವಾರುಗಳನ್ನು ಸಾಕಣೆ ಮಾಡುತ್ತಿದ್ದಾರೆ.

ಮಳೆ ಇಲ್ಲದ ಕಾರಣ ಕೀಟಬಾಧೆ ಕಾಣಿಸಿಕೊಂಡು ಮೇವು ಪರಿಪೂರ್ಣವಾಗಿ ರೈತರಿಗೆ ಸಿಕ್ಕಿಲ್ಲ. ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ತರುತ್ತಿದ್ದ ಒಣ ಮೇವು ಅಪರೂಪವಾಗಿದ್ದು, ಭತ್ತದ ಹುಲ್ಲಿಗೂ ಬೆಲೆ ಹೆಚ್ಚಿರುವ ಕಾರಣ ರೈತರು ಆರ್ಥಿಕವಾಗಿ ನಷ್ಟ ಹೊಂದುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಬೆಲೆ ನೀಡಿದರಷ್ಟೇ ಬದುಕಲು ಸಾಧ್ಯ

ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ರೈತರಿಗೆ ಸರ್ಕಾರದ 5 ರೂ. ಜತೆಗೆ 45 ರೂ. ನೀಡಿದರಷ್ಟೇ ಬೆಲೆ ಏರಿಕೆಯ ದಿನಗಳಲ್ಲಿ ಬದುಕಲು ಸಾಧ್ಯ. ಇಲ್ಲವಾದರೆ ನಷ್ಟಕ್ಕೀಡಾಗಿ ಒಲ್ಲದ ಮನಸ್ಸಿನಿಂದಲೇ ಹೈನುಗಾರಿಕೆ ಕೈಬಿಡುವ ಸನ್ನಿವೇಶ ನಿರ್ಮಾಣ ಆಗುವುದು ದೂರ ಇಲ್ಲ. ಪ್ರಸ್ತುತ ರೈತರಿಗೆ ಹಾಲು ಉತ್ಪಾದನೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಬನ್ನಿಕುಪ್ಪೆಯ ರೈತ ಚಂದ್ರಗಿರಿ.

ಉದ್ಯೋಗ

ಗ್ರಾಮೀಣ ಹಾಲು ಉತ್ಪಾದಕ ಸಂಘಗಳಲ್ಲಿ ನೌಕರರಿಗೆ ಉದ್ಯೋಗ ಅಲ್ಲದೆ ಚಾಲಕರು, ವಾಹನ ಮಾಲೀಕರು, ಹಾಲು ಸಾಗಿಸುವ ನೌಕರರಿಗೆ ಪಶು ಆಹಾರ ಮಾರಾಟಗಾರರು, ಮೂಟೆ ಸಾಗಿಸುವ ಕೂಲಿಕಾರ್ಮಿಕರು, ಡೇರಿಗಳಿಗೆ ಪಶು ಆಹಾರ ಸರಬರಾಜು ಮಾಡುವವರಿಗೆ ಡೇರಿಗಳು ಒಂದಲ್ಲ ಒಂದು ರೀತಿ ಸಂಪಾದನೆಯ ಹಾದಿ ತೋರಿ ಬದುಕಿಗೆ ಆಸರೆಯಾಗಿವೆ.

ಪಶು ಆಹಾರ ಧಾರಣೆ

ಆಹಾರ                    ತೂಕ       ಪ್ರಸ್ತುತ ದರ      ಹಿಂದಿನ ದರ   ಏರಿಕೆ

ಹಿಂಡಿ                      30 ಕೆ.ಜಿ.  1600 ರೂ.     1200 ರೂ. 400 ರೂ.

ಜೋಳ                     45 ಕೆ.ಜಿ.  1200 ರೂ.     1050 ರೂ. 150 ರೂ.

ರವೆ ಬೂಸ                 45 ಕೆ.ಜಿ.  1300 ರೂ.      1000 ರೂ. 300 ರೂ.

ಚಕ್ಕೆ ಬೂಸ                30 ಕೆ.ಜಿ.    800 ರೂ.      650 ರೂ.   150 ರೂ.

ಮುಸುಕಿನ ಜೋಳ         ಕೆ.ಜಿ.ಗೆ 27ರೂ. ಕೆ.ಜಿ.ಗೆ 23 ರೂ. 4 ರೂ.

(ಕೆಎಂಎಫ್ ಫೀಡ್ ಮಾತ್ರ ಕಳೆದ 6 ತಿಂಗಳಿಂದ 50 ಕೆ.ಜಿ. ಮೂಟೆಗೆ 1165 ರೂ. ದರವೇ ಇದ್ದರೆ, ಖಾಸಗಿ ಪಶು ಆಹಾರಗಳ ಬೆಲೆ ಏರಿಕೆ ಕಂಡಿದೆ.)

ಪ್ರಸ್ತುತ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿ ನಷ್ಟವಾಗುತ್ತಿದೆ ಎಂದು ರೈತರು ಹೇಳುತ್ತಲೇ ಇದ್ದಾರೆ. ಈಗಾಗಲೇ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ 7 ರೂ. ಹೆಚ್ಚಿಸುವಂತೆ ಒಕ್ಕೂಟಗಳು, ಕೆಎಂಎಫ್‌ನಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ.

ಪಿ. ನಾಗರಾಜು, ನಿರ್ದೇಶಕ, ಬಮುಲ್

ಲೀಟರ್ ಹಾಲಿಗೆ ಹಾಲಿಗೆ 32.85 ರೂ. ಸಾಕಾಗುತ್ತಿಲ್ಲ. ಪಶು ಆಹಾರದ ಬೆಲೆ ಏರುತ್ತಿದೆ.ಗಳು ಏರುತ್ತಾ ಸಾಗಿವೆ ಜೊತೆಗೆ ಮುಂಗಾರುಪೂರ್ವ ಮಳೆಯಿಂದ ಹಸಿರು, ಒಣ ಮೇವಿಗೂ ಅಭಾವವಿದೆ. ಸರ್ಕಾರ ಕೂಡಲೇ 7 ರೂ. ಪ್ರೋತ್ಸಾಹಧನದ ಜೊತೆಗೆ ಲೀ.ಹಾಲಿಗೆ 45 ರೂ. ನೀಡಬೇಕು. ಇದರಿಂದ ರೈತರು ಹೈನುಗಾರಿಕೆಯಲ್ಲಿ ಜೀವನ ಕಾಣಬಹುದು. ಇಲ್ಲದಿದ್ದರೆ ನಷ್ಟ ಕಟ್ಟಿತ್ತಬುತ್ತಿ.

ಶಿವಲಿಂಗಪ್ಪ, ಸಬ್ಬಕೆರೆ ಡೇರಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net