

ಕುದೂರು: ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯ, ಅಂಗಡಿಗಳಲ್ಲಿ ಹಾಗೂ ಬೋರ್‌ವೆಲ್ ಕೇಬಲ್ ಕದಿಯುತ್ತಿದ್ದ ಮೂವರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ರಸ್ತೆಪಾಳ್ಯ ಗ್ರಾಮದ ನಟರಾಜ (25), ದಂಡೇನಹಳ್ಳಿಯ ರೇವಣ್ಣ (27) ಹಾಗೂ ಮುನಿರಾಜು (26) ಬಂಧಿತರು. ಕಳೆದ ಆ.19ರಂದು ಕುದೂರು ಠಾಣೆ ವ್ಯಾಪ್ತಿಯ ತಾಳೇಕೆರೆ ಹ್ಯಾಂಡ್‌ಪೋಸ್ಟ್‌ನ ಮಂಜುನಾಥ್ ಅವರ ಪತ್ನಿ ಕಲ್ಪನಾ ಅವರು ತಮ್ಮ ಕೋಳಿ ಅಂಗಡಿಯ ಬಾಗಿಲನ್ನು ಅರ್ಧಮುಚ್ಚಿ ಪಕ್ಕದಲ್ಲೇ ಇದ್ದ ಮನೆ ಹೋಗಿದ್ದಾರೆ.
ಕೆಲ ಹೊತ್ತಿನ ನಂತರ ಅಂಗಡಿ ಒಳಗಿನಿಂದ ಬಂದ ಶಬ್ದ ಕೇಳಿ ಹೋಗುತ್ತಿದ್ದಾಗ ಅಂಗಡಿಯೊಳಗಿಂದ ಒಬ್ಬ ಹೊರಗೆ ಬಂದು ಓಡಿಹೋಗಿದ್ದಾನೆ. ಈ ಸಂಬಂಧ ಅಂಗಡಿಯಲ್ಲಿದ್ದ 10 ಸಾವಿರ ರೂ. ಕಳವಾಗಿದೆ ಎಂದು ಮಂಜುನಾಥ್ ಹಾಗೂ ಕಲ್ಪನಾ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದಲ್ಲಿ ವೃತ್ತ ನಿರೀಕ್ಷಕ ಎ.ಪಿ. ಕುಮಾರ್ ನೇತೃತ್ವದ ತಂಡ ಎಸ್‌ಪಿ ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ ಪ್ರವೀಣ್ ಮಾರ್ಗದರ್ಶದಲ್ಲಿ ಪ್ರಕರಣ ಭೇದಿಸಿದ್ದು, ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ದೇವಾಲಯ, ಚಿಲ್ಲರೆ ಅಂಗಡಿಗಳಲ್ಲಿ ಕಳ್ಳತನ ಹಾಗೂ ಬೋರ್‌ವೆಲ್ ಕೇಬಲ್ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬಂಧಿತರ ಬಳಿಯಿದ್ದ ಒಂದು ದ್ವಿಚಕ್ರ ವಾಹನ, 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 8 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ ಎಂದು ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ಮಾಹಿತಿ ನೀಡಿದರು. ಎಎಸ್‌ಐ ಲಿಂಗದೇವರು, ಸಿಬ್ಬಂದಿ ಶಿವಕುಮಾರ್, ಗುರುಮೂರ್ತಿ, ಸೂರ್ಯಕುಮಾರ್, ಶಿವರಾಜು, ದರ್ಶನ್, ಲೋಹಿತ್ ಕುಮಾರ್ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.