

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲಾ ಕೇಂದ್ರವಾಗಿ 15ನೇ ವಸಂತದಲ್ಲಿರುವ ರಾಮನಗರಕ್ಕೆ ಇನ್ನೂ ಸೂಕ್ತ ಬಸ್ ನಿಲ್ದಾಣದ ಭಾಗ್ಯ ದೊರೆತಿಲ್ಲ. ಬೆಂಗಳೂರು - ಮೈಸೂರು ನಡುವೆ ಇರುವ ಬಹುತೇಕ ಎಲ್ಲ ಪ್ರಮುಖ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಸ್ ನಿಲ್ದಾಣವಿದ್ದರೂ ರೇಷ್ಮೆ ನಗರಿ ರಾಮನಗರದಲ್ಲಿ ಮಾತ್ರ ಇದಕ್ಕೆ ಅವಕಾಶ ಇಲ್ಲದಂತೆ ಆಗಿದೆ. ಇದೀಗ ಶಾಸಕ ಇಕ್ಬಾಲ್ ಹುಸೇನ್ ನೂತನ ಬಸ್ ನಿಲ್ದಾಣ ನಿರ್ಮಾಣ ಸಂಬಂಧ ಪ್ರಸ್ತಾಪ ಮಾಡಿರುವುದು ಪ್ರಯಾಣಿಕರಲ್ಲಿ ಸಂತಸವನ್ನು ಉಂಟು ಮಾಡಿದೆ.
ಇರುವುದು ಕಿಷ್ಕಿಂದೆ
ಪ್ರಸ್ತುತ ರಾಮನಗರದಲ್ಲಿ ಇರುವ ಬಸ್ ನಿಲ್ದಾಣ ಹೋಬಳಿ ಮಟ್ಟಕ್ಕೆ ಅರ್ಹವಾದ ಬಸ್ ನಿಲ್ದಾಣದಂತಿದೆ. ಇದರಲ್ಲೇ ಬೆಂಗಳೂರು ಕಡೆಗೆ ಹೋಗುವ ಬಸ್‌ಗಳು, ಮಾಗಡಿ, ಕನಕಪುರ ಹಾಗೂ ರಾಮನಗರ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಸ್‌ಗಳು ಓಡಾಡಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಬಂದರೆ ಮುಗಿದೇ ಹೋಯಿತು. ಹೆಚ್ಚುವರಿ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಂತು ಮುಂದೆ ಸಾಗಬೇಕು. ಇದರ ಜತೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯೂ ಸಹ ಇಲ್ಲಿಯೇ ಇದ್ದು, ಎಲ್ಲವೂ ಕಿಷ್ಕಿಂದೆಯಂತಹ ಜಾಗದಲ್ಲೇ ನಡೆಯಬೇಕಿದೆ.
ಮೈಸೂರಿಗೆ ನಿಲ್ದಾಣವೇ ಇಲ್ಲ
ಬೆಂಗಳೂರಿನಿಂದ ಬರುವ ಬಸ್‌ಗಳು ನಿಲ್ಲಲು ರಾಮನಗರದಲ್ಲಿ ಬಸ್ ನಿಲ್ದಾಣವೇ ಇಲ್ಲ. ಮಂಡ್ಯ, ಮೈಸೂರು ಕಡೆಗೆ ಹೋಗುವ ಪ್ರಯಾಣಿಕರು ಈಗಲೂ ಬಿಸಿಲು, ಮಳೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇತ್ತೀಚೆಗೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಬಸ್ ಶೆಲ್ಟರ್ ನಿರ್ಮಾಣ ಮಾಡಿದೆಯಾದರೂ ಹೆಚ್ಚು ಮಂದಿ ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಮೈಸೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ನೆರಳು ಒದಗಿಸಲು ಬಸ್ ನಿಲ್ದಾಣ ಮಾಡುವಂತೆ ಹಲವಾರು ವರ್ಷಗಳಿಂದ ಕೋರುತ್ತಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನ ಹರಿಸಿಲ್ಲ.
ಭರವಸೆ ಮೂಡಿಸಿದೆ
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ರಾಮನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಪ್ರಸ್ತಾಪ ಮಾಡಿದ್ದರು. ಸಾರಿಗೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ ಶಾಸಕರು, ರಾಮನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲ, ಈ ಹಿನ್ನೆಲೆಯಲ್ಲಿ ನೂತನ ಬಸ್ ನಿಲ್ದಾಣದ ಅಗತ್ಯವಿದೆ, ಕೂಡಲೇ ಇದಕ್ಕೆ ಬೇಕಾದ ಅನುದಾನ ನೀಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆಯನ್ನೂ ನೀಡಿದ್ದಾರೆ.
ಅಗತ್ಯವಾಗಿ ಬೇಕಿದೆ
ಬೆಂಗಳೂರು - ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 4 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವಿದೆ. ಇದೇ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಪ್ರಸ್ತಾಪ ಹಿಂದಿನಿಂದಲೂ ಇದೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಈ ಯೋಜನೆ ಕೈಗೂಡಲಿಲ್ಲ ಹಾಗೂ ಎಲ್ಲರನ್ನೂ ಒಟ್ಟಿಗೆ ಕೂರಿಸಿ ಸಮಸ್ಯೆ ಪರಿಹಾರ ಮಾಡುವ ಪ್ರಯತ್ನವೂ ಈವರೆಗೂ ಆಗಿಲ್ಲ. ಅಲ್ಲದೆ, ಕೈಗಾರಿಕಾ ಪ್ರದೇಶ ನಗರದ ಹೃದಯ ಭಾಗದಲ್ಲಿಯೇ ಇರುವ ಕಾರಣ, ಇದನ್ನು ಹೊರವಲಯಕ್ಕೆ ಸ್ಥಳಾಂತರ ಮಾಡಿ, ಸೂಕ್ತ ಸೌಲಭ್ಯಗಳನ್ನು ನೀಡುವ ಮೂಲಕ ಕೈಗಾರಿಕೆಗಳ ಮಾಲೀಕರ ಮನವೊಲಿಸಬೇಕಿದೆ. ಈ ನಿಟ್ಟಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎನ್ನುವ ನಂಬಿಕೆ ಸಾರ್ವಜನಿಕರದ್ದು.
ಫುಡ್ ಕೋರ್ಟ್ ಬೇಕಿದೆ
ರಾಮನಗರದಲ್ಲಿ ಫುಡ್ ಕೋರ್ಟ್ ಅಗತ್ಯವಿದೆ. ಒಂದೇ ಸೂರಿನಡಿ ವಿವಿಧ ಬಗೆಯ ತಿಂಡಿಗಳು, ಚಾಟ್ಸ್, ಊಟ ಎಲ್ಲವೂ ದೊರೆಯುಂತೆ ಇರುವ ಫುಡ್ ಕೋರ್ಟ್‌ಗಳು ಈಗಾಗಲೇ ಶಿವಮೊಗ್ಗ ಮತ್ತು ಹಾಸನದಲ್ಲಿ ಯಶಸ್ವಿ ಆಗಿವೆ. ಇದೇ ಮಾದರಿಯಲ್ಲಿ ರಾಮನಗರದಲ್ಲಿಯೂ ಫುಡ್ ಕೋರ್ಟ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗಂಭೀರ ಚಿಂತನೆ ನಡೆಸಬೇಕಿದೆ. ಇದರಿಂದಾಗಿ ರಾಮನಗರದ ಸವಿರುಚಿಯನ್ನು ಎಲ್ಲರಿಗೂ ಪರಿಚಯಿಸುವ ಅವಕಾಶವೂ ದೊರತಂತೆ ಆಗುವ ಜತೆಗೆ, ನಗರಸಭೆಗೂ ಆದಾಯ ದೊರೆಯುತ್ತದೆ.
ರಾಮನಗರದಲ್ಲಿ ಬಸ್ ನಿಲ್ದಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೇಕಾದ ಸಹಕಾರವನ್ನು ಸಾರಿಗೆ ಸಚಿವರು ನೀಡಬೇಕು.
ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ, ರಾಮನಗರ