

ಕನಕಪುರ: ಕರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಮತ್ತೆ ಆರಂಭಿಸುವಂತೆ ಗೇರಹಳ್ಳಿ ಗ್ರಾಮಸ್ಥರು ಸಾರಿಗೆ ಸಂಸ್ಥೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕನಕಪುರದಿಂದ ಗೇರಹಳ್ಳಿ ಮಾರ್ಗವಾಗಿ ಕಬ್ಬಾಳು ಗ್ರಾಮಕ್ಕೆ ಸಂಚರಿಸುತ್ತಿದ್ದ ಎರಡು ಸಾರಿಗೆ ಬಸ್‌ಗಳು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದವು. ಗುರುವಾರ ಗೇರಹಳ್ಳಿ ಗ್ರಾಮದಲ್ಲಿ ಕಚುವನಹಳ್ಳಿ ಮಾರ್ಗವಾಗಿ ಸಂಚರಿಸುವ ಬಸ್ ತಡೆದು ಪ್ರತಿಭಟಿಸಿದರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಯುವಕರು ಕಿರಣ್‌ಗೌಡ, ಶ್ರಿನಿವಾಸ್ ಮಾತನಾಡಿ, ಸ್ಥಗಿತಗೊಂಡಿರುವ ಬಸ್‌ಗಳ ಮರು ಸಂಚಾರಕ್ಕೆ ಸಂಸದರು ಪತ್ರ ಬರೆದಿದ್ದರೂ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಬಸ್ ಸಂಚಾರ ಆರಂಭಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.