

ವಿಜಯವಾಣಿ ಸುದ್ದಿಜಾಲ
ಕೈಲಾಂಚ: ವಿಧಿಯ ಆಟವೇ ಬೇರೆ ಇತ್ತು. ನಗು ನಗುತ್ತಾ ದೇವರ ದರ್ಶನಕ್ಕೆ ಹೋಗುತ್ತಿದ್ದ ಕುಟುಂಬಕ್ಕೆ ಬಸ್ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ಪಕ್ಷಿಯನ್ನು ಹಾರಿಸಿಕೊಂಡು ಹೋಗಿಯೇ ಬಿಟ್ಟ. ಆನಂದದಿಂದ ತೇಲುತ್ತಿದ್ದ ಕುಟುಂಬದಲ್ಲಿ ಈಗ ನಾಲ್ಕು ವರ್ಷದ ಮಗುವಿನ ಸಾವಿನಿಂದ ಕಣ್ಣಿರ ಕಡಲಲ್ಲೇ ಮುಳಗುವಂತೆ ಆಗಿದೆ.
ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವನ್ನಪ್ಪಿ, ತಂದೆ ತಾಯಿ ಮತ್ತು ಮತ್ತೊಂದು ಮಗು ಗಾಯಗೊಂಡ ಘಟನೆ ನಡೆದಿದೆ.
ಮಾಗಡಿ ತಾಲೂಕು ತೊರೆಪಾಳ್ಳ ಗ್ರಾಮದ ರೇಣುಕಯ್ಯ, ಶಿಲ್ಪ ದಂಪತಿ ತಮ್ಮ ಮಕ್ಕಳಾದ 4 ವರ್ಷದ ಚಂದನ, ಒಂದು ವರ್ಷದ ಕೃತಿಕಾರೊಂದಿಗೆ ಬೈಕ್‌ನಲ್ಲಿ ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕಾಗಿ ಸೋಮವಾರ ತೆರಳುತ್ತಿದ್ದರು.
ರಾಮನಗರ-ಕನಕಪುರ ರಸ್ತೆಯ ಗೌಡಯ್ಯನದೊಡ್ಡಿ ಗ್ರಾಮದ ಕೆರೆ ಏರಿ ರಸ್ತೆಯಲ್ಲಿ ಕನಕಪುರ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ರಸ್ತೆ ಗುಂಡಿ ತಪ್ಪಿಸುವ ಸಲುವಾಗಿ ಬಲಭಾಗಕ್ಕೆ ಚಲಿಸಿದೆ. ಈ ವೇಳೆ ಬೈಕ್ ಮುಂದೆ ಚಲಿಸುತ್ತಿದ್ದ ಆಟೋ ತಕ್ಷಣವೇ ಬ್ರೇಕ್ ಹಾಕಿದೆ. ಇದರಿಂದ ಆಯತಪ್ಪಿದ ಬೈಕ್ ರಸ್ತೆಗೆ ಬಿದಿದ್ದು, ಬೈಕ್‌ನ ಮುಂಭಾಗ ಕುಳಿತಿದ್ದ ನಾಲ್ಕು ವರ್ಷದ ಚಂದನ ಮೇಲೆ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪಿದ್ದಾಳೆ.
ರೇಣುಕಯ್ಯ ಶಿಲ್ಪ ಮತ್ತು ಒಂದು ವರ್ಷದ ಕೃತಿಕಾ ಎಂಬ ಮಗು ಎಡಭಾಗಕ್ಕೆ ಬಿದ್ದ ಪರಿಣಾಮ ಅವರಿಗೆ ಗಾಯಗಳಾಗಿ ಅದೃಷ್ಟವಶಾತ್ ಬದುಕುಳಿದರು. ರೇಣುಕಯ್ಯ, ಶಿಲ್ಪ ಮತ್ತು ಮಗುವಿಗೆ ರಾಮನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಣ್ಣೀರು : ಅಫಘಾತದಲ್ಲಿ ಮಗು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ರಾಮನಗರ-ಕನಕಪುರ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಅಪಘಾತದ ಭೀಕರತೆಯನ್ನು ಕಂಡು ಮರುಕಪಟ್ಟರು. ಗಾಯಗೊಂಡ ದಂಪತಿ ಮತ್ತು ಮಗುವನ್ನು ಸುತ್ತಮುತ್ತಲಿನ ಜನರು ತಕ್ಷಣವೇ ಸಿಕ್ಕ ಸಿಕ್ಕ ವಾಹನಗಳಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.
ಅಫಘಾತ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ವೈ. ಗಿರಿರಾಜು, ಎಎಸ್‌ಐ ಪುರಂದರ್, ದಫೇದಾರ್ ಅನ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ಆಟೋ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸ್ಥಳದಿಂದ ಪರಾರಿಯಾಗಿದ್ದರು.