23ರಂದು ಬಸವೇಶ್ವರ ಮಂದಿರ ಲೋಕಾರ್ಪಣೆ

Rmgm-Ph-001-Basava Puthali Anavarana Channabasavananda Swamiji Pressmeet News Rmgm- 20-7-2023
Published on
  • ಕುಂಬಳಗೋಡು ಚನ್ನಬಸವೇಶ್ವರ ಜ್ಞಾನಪೀಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾಹಿತಿ

ರಾಮನಗರ
ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ದಾಳಿಂಬ ಗ್ರಾಮದಲ್ಲಿ ಜು.23ರಂದು ಗುರು ಬಸವೇಶ್ವರ ಪಾರ್ಥನಾ ಮಂದಿರ ಮತ್ತು ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿದೆ ಎಂದು ಕುಂಬಳಗೋಡಿನ (ಬೆಂಗಳೂರಿನ) ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಹಾಸನ, ಚಿಕ್ಕಮಗಳೂರು ಸೇರಿ ಹಲವು ಸ್ಥಳಗಳಲ್ಲಿ 800ಕ್ಕೂ ಹೆಚ್ಚು ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿವೆ. ಪ್ರಮುಖವಾಗಿ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಪುತ್ಥಳಿ ಇರಲಿಲ್ಲ. ಇದೇ ಪ್ರಥಮ ಬಾರಿಗೆ ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಜಿಲ್ಲೆಯಲ್ಲಿ ಅನುಭವ ಮಂಟಪ ಮಾದರಿಯಲ್ಲಿ ಬಸವಣ್ಣ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಜತೆಗೆ ಗುರುಬಸವೇಶ್ವರ ಪ್ರಾರ್ಥನಾ ಮಂದಿರವೂ ಉದ್ಘಾಟನೆಗೊಳ್ಳುತ್ತಿದೆ ಎಂದರು. 


ಜು.23ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವ ಮಂಟಪಕ್ಕೆ ಭೂದಾನ ಮಾಡಿದ ದಾಸೋಹಿ ಶರಣ ರಾಮಣ್ಣ ಅವರ 11ನೇ ವರ್ಷದ ಲಿಂಗೈಕ್ಯ ಸಂಸ್ಮರಣೆ ಅಂಗವಾಗಿ ಗುರುಮಕ್ಕಳ ಸಮಾವೇಶ ಆಯೋಜಿಸಲಾಗಿದೆ. ಮರಳವಾಡಿ, ಬಸವಗುರುಕುಲದ ಡಾ.ಚನ್ನಬಸವಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ಮೃತ್ಯುಂಜಯ ಮಹಾಸ್ವಾಮೀಜಿ ಬಸವ ಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರು ವಿಶ್ವ ಧರ್ಮಪೀಠದ ಜಯ ಬಸವಾನಂದ ಸ್ವಾಮೀಜಿ, ಬೀದರ್ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಸಾತನೂರು ಗುರುಮಲ್ಲೇಶ್ವರ ಮಠದ ಸದ್ಗುರು ನಿಜಗುಣ ಸ್ವಾಮೀಜಿ, ಬೆಳಗಾವಿಯ ಪ್ರಭುಲಿಂಗ ಸ್ವಾಮೀಜಿ, ಚಳ್ಳಕೆರೆಯ ಗುರುಸ್ವಾಮೀಜಿ ಭಾಗವಹಿಸಲಿದ್ದು, ರಂಗ ಕಲಾವಿದ ಸಾತನೂರು ಎಸ್.ವಿ.ಮಹದೇವ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.


ಹಲವು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿರುವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ನ್ಯಾಯ ಕಲ್ಪಿಸಿಕೊಡಬೇಕು. ನಾಗಮೋಹನ್ ದಾಸ್ ವರದಿಯನ್ನು ಕೇಂದ್ರಕ್ಕೆ ಮತ್ತೆ ಮರು ಪ್ರಸ್ತಾವನೆ ಸಲ್ಲಿಸಬೇಕು. ಕೇಂದ್ರ ಸರ್ಕಾರ ಕೋಟ್ಯಂತರ ಮಂದಿಯ ಬಹುದಿನಗಳ ಮಾನ್ಯತೆಯ ಹೋರಾಟವನ್ನು ಪುರಸ್ಕರಿಸಬೇಕು. ಲೋಕಸಭೆ ಚುನಾವಣೆಯ ಒಳಗಾಗಿ ನಾಗಮೋಹನದಾಸ್ ವರದಿ ಪರಿಗಣಿಸಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ಹೋರಾಟ ಮಾಡಲಾಗುತ್ತದೆ.
ಚನ್ನಬಸವಾಂದ ಸ್ವಾಮೀಜಿ, ಚನ್ನಬಸವೇಶ್ವರ ಜ್ಞಾನಪೀಠ ಕುಂಬಳಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net