ಸಲಿಂಗ ಕಾಮಕ್ಕೆ ಬಾಲಕನ ಕೊಲೆ ಶಂಕೆ ಬಾಲಕನ ಪತ್ತೆಗಾಗಿ ಕಾರ್ಯಾಚರಣೆ

25-03-web-scuba
Published on

ಹಾರೋಹಳ್ಳಿ (ರಾಮನಗರ) 
ಕೊಲೆಯಾಗಿದೆ ಎನ್ನಲಾದ ಅಪ್ರಾಪ್ತ ಬಾಲಕನ ಮೃತದೇಹ ಪತ್ತೆಗೆ ಹಾರೋಹಳ್ಳಿ ತಾಲೂಕಿನ ಗಬ್ಬಾಡಿ ಕೆರೆಯಲ್ಲಿ
ನುರಿತ ಈಜುಗಾರರ ತಂಡ ಕಾರ್ಯಾಚರಣೆ ಆರಂಭಿಸಿತು.

ಕನಕಪುರದ ಎಂಜಿ ರಸ್ತೆಯ ತಾಯಪ್ಪನ ಗಲ್ಲಿ ನಿವಾಸಿ ಆಶಾ ಎಂಬುವರ ಪುತ್ರ ನಾಗೇಂದ್ರ ಪ್ರಸಾದ್ (17) 2022ರ ಮೇ 19ರಂದು ಆರೋಪಿ ವಕೀಲ ಶಂಕರೇಗೌಡ ಅವರ ಕಚೇರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದವನು ನಾಪತ್ತೆಯಾಗಿದ್ದ.

ಈ ಪ್ರಕರಣದಲ್ಲಿ ಕನಕಪುರ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಶಂಕರೇಗೌಡ ಮತ್ತು ಮೈಸೂರು ಮೂಲದ ಅರುಣ್ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು. ಆದರೆ, ಶಂಕರೇಗೌಡ ತನಿಖೆ ವೇಳೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಂದಿನ ಎಸ್‌ಪಿ ಸಂತೋಷ್ ಬಾಬು ಅವರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಾಗ ಬಾಲಕನನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು ಕೊಲೆ ಮಾಡಿ ಕೆರೆಗೆ ಎಸೆದಿರುವ ಬಗ್ಗೆ ಸುಳಿವು ಸಿಕ್ಕಿತ್ತು.

ತನಿಖೆ ಚುರುಕುಗೊಳಿಸಿರುವ ಪೊಲೀಸರು ಈಗ ನುರಿತ ಈಜುಗಾರರನ್ನು ಬಳಸಿಕೊಂಡು ಆರೋಪಿ ಸ್ವಗ್ರಾಮ ಗಬ್ಬಾಡಿ ಗ್ರಾಮದ ಕೆರೆ ಮತ್ತು ದಾಳಿಂಬ ಗ್ರಾಮದ ತೋಟದ ಬಾವಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಕನಕಪುರ ವೃತ್ತ ನಿರೀಕ್ಷಕ ಕೃಷ್ಣಲಮಾಣಿ ನೇತೃತ್ವದ ತಂಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net