ರಾಮನಗರ: ನಗರದ ಬೋಳಪ್ಪನಹಳ್ಳಿ ಕರೆ ಏರಿ ಬಿರುಕು ಬಿಟ್ಟಿದ್ದು ತುಂಬಿರುವ ಕೆರೆಯ ನೀರನ್ನು ಹೊರ ಹಾಕುವ ಕೆಲಸಕ್ಕೆ ತಾಲೂಕು ಆಢಳಿತ ಮುಂದಾಗಿದೆ.
ಸುಮಾರು 80 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕೆರೆ 20 ವರ್ಷಗಳ ನಂತರ ತುಂಬಿದ್ದು ನಗರದ ಜನತೆಯೂ ಖುಷಿ ಪಟ್ಟು, ಶನಿವಾರದಿಂದಲೂ ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ ಹೆಚ್ಚಿಗೆ ಕಾಲ ಉಳಿಯಲಿಲ್ಲ, ಕಾರಣ ಕೆರೆಯ ಏರಿಯ ಒಂದು ಭಾಗ ಕುಸಿದಿದ್ದು ಇದು ಆತಂಕವನ್ನು ಸೃಷ್ಠಿ ಮಾಡಿದೆ.
ಒಂದು ವೇಳೆ ಮತ್ತೆ ಮಳೆಯಾದರೆ ಏರಿ ಒಡೆದು ನಗರಕ್ಕೆ ನೀರು ನುಗ್ಗುವ ಆತಂಕ ಉಂಟಾಗಿದೆ.
ಕೆರೆ ನೀರಿನ ಸಂಗ್ರಹ ಸಾಮರ್ಥ್ಯ 27.019 ಎಂಸಿಎಫ್ ಟಿ ಆಗಿದ್ದು, ಒಂದು ವೇಳೆ ಇಷ್ಟು ಪ್ರಮಾಣದ ನೀರು ನಗರಕ್ಕೆ ನುಗ್ಗಿದರೆ ಭಾರಿ ಅನಾಹುತ ಉಂಟಾಗುತ್ತದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ವಿಜಯಕುಮಾರ್, ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂಜಾಗ್ರಾತ ಕ್ರಮವಾಗಿ ಹೆಚ್ಚಿಗೆ ನೀರು ಸಂಗ್ರಹವಾದರೂ ಹರಿದು ಹೋಗಲು ಸರಾಗವಾಗುವಂತೆ ಕೆರೆಯ ಕೋಡಿಯನ್ನು ಒಡೆಯಲಾಗಿದೆ. ಸೋಮವಾರ ಬೆಳಿಗ್ಗೆ ಸಣ್ಣ ನೀರಾವರಿ ಇಲಾಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಿರುಕು ಬಿಟ್ಟಿರುವ ಏರಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಮನೆಗೆ ನುಗ್ಗಿದ ನೀರು: ಭಾನುವಾರ ರಾತ್ರಿ ಕೆರೆ ಕೋಡಿಯನ್ನು ಒಡೆಯಲಾಗಿದೆ. ಇದರ ಜೊತೆ ಜೊತೆಗೆ ಸೋಮವಾರ ಮುಂಜಾನೆಯಿಂದಲೂ ಭಾರಿ ಮಳೆ ಆಗುತ್ತಿರುವ ಕಾರಣದಿಂದಾಗಿ ನೀರಿನ ಹರಿವು ಹೆಚ್ಚಾಗಿ ನೀರು ರಾಮನಗರದ ಮಂಜುನಾಥ ನಗರ ಸೇರಿದಂಥೆ ಸುತ್ತ ಮುತ್ತಲ ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ಕಾಲ ದೂಡುವಂತೆ ಆಗಿದೆ.