ಮುನ್ನೆಲೆಗೆ ಬಂದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು
ಪಕ್ಷಕ್ಕೆ ಹೆಚ್ಚು ಮತ ತಂದುಕೊಟ್ಟವರಿಗೆ ಆದ್ಯತೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಸಿದ್ದರಾಮಯ್ಯ ಸರ್ಕಾರ ರಚನೆ ಆಗಿ ನೂರು ದಿನಗಳು ಪೂರ್ಣಗೊಂಡಿದ್ದು, ಇದೀಗ ನಿಗಮ - ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕಸರತ್ತು ಮುನ್ನೆಲೆಗೆ ಬಂದಿದೆ. ಜಿಲ್ಲೆಯ ನಾಲ್ವರು ಪ್ರಮುಖರ ಹೆಸರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದು, ಮೊದಲ ಎರಡೂವರೆಗೆ ವರ್ಷಗಳ ಅವಧಿಗೆ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.
ಕೆಪಿಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ, ಮಾಜಿ ಶಾಸಕ ಕೆ.ರಾಜು, ಹಾಲಿ ನಗರಸಭೆ ಸದಸ್ಯರೂ ಆಗಿರುವ ಹಿರಿಯ ಮುಖಂಡ ಕೆ.ಶೇಷಾದ್ರಿ ಮತ್ತು ಕನಕಪುರದ ದುಂತೂರು ವಿಶ್ವನಾಥ್ ಅವರಲ್ಲಿ ಇಬ್ಬರಿಗೆ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ.
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಎ. ಇಕ್ಬಾಲ್ ಹುಸೇನ್ ಗೆಲುವು ಸಾಧಿಸಲು ಹಲವಾರು ಮುಖಂಡರ ಅವಿರತ ಶ್ರಮ ಇದೆ. ಇವರಲ್ಲಿ ಪ್ರಮುಖರಾಗಿರುವ ಹಲವರು ತಮಗೆ ನಿಗಮ -ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಆದರೆ ಯಾರಿಗೆ ನೀಡಬೇಕು ಎನ್ನುವ ವಿಚಾರ ಬಂದಾಗ ಸಂಸದ ಡಿ.ಕೆ. ಸುರೇಶ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಿರ್ಧಾರವೇ ಅಂತಿಮವಾಗಲಿದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಯಾರಿಗೆ ನೀಡಬೇಕು, ಎರಡನೇ ಅವಧಿಗೆ ಯಾರಿಗೆ ನೀಡಬೇಕು ಎನ್ನುವ ಲೆಕ್ಕಾಚಾರಗಳು ಪಕ್ಷದ ವೇದಿಕೆಯಲ್ಲಿ ನಡೆದಿವೆ. ಯಾರು ಪಕ್ಷದ ಅಭ್ಯರ್ಥಿ ಪರವಾಗಿ ಹೆಚ್ಚಿನ ಮತಗಳನ್ನು ತಂದುಕೊಡುವಲ್ಲಿ ಯಶ ಸಾಧಿಸಿದ್ದಾರೆ ಎನ್ನುವ ಮಾನದಂಡದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲಭ್ಯ ಮಾಹಿತಿ ಪ್ರಕಾರ ಎಂಇಐನ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ನಗರಸಭೆ ಸದಸ್ಯ ಕೆ.ಶೇಷಾದ್ರಿ ಅವರಿಗೆ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂದು ತಿಳಿದು ಬಂದಿದೆ. ರಾಮನಗರ ನಗರ ಪ್ರದೇಶದಲ್ಲಿ ಇಕ್ಬಾಲ್ ಹುಸೇನ್ ಅವರಿಗೆ ಹೆಚ್ಚು ಮತಗಳು ಬರಲು ಕೆ.ಶೇಷಾದ್ರಿ ಅವರ ಪಾತ್ರ ಪ್ರಮುಖವಾದದ್ದು ಎನ್ನುವ ಕಾರಣಕ್ಕೆ ಪಕ್ಷದ ನಾಯಕರೂ ಇವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಮಾಜಿ ಶಾಸಕ ಕೆ.ರಾಜು ಅವರ ಹೆಸರು ಮುಂಚೂಣಿಯಲ್ಲಿ ಇದೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜು ಸ್ವಗ್ರಾಮದಲ್ಲಿ ಪಕ್ಷಕ್ಕೆ ಬಂದ ಮತಗಳು, ಇತ್ತೀಚೆಗೆ ನಡೆದ ಡೇರಿ, ವಿಎಸ್ಸೆಸ್ಸೆನ್ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಆದ ಸೋಲು ಇವರ ಆಯ್ಕೆಗೆ ಕೊಂಚ ಹಿನ್ನಡೆಯನ್ನು ಉಂಟುಮಾಡಿವೆ ಎನ್ನಲಾಗಿದೆ. ಇದನ್ನೆ ಪ್ರಮುಖ ಅಸ್ತ್ರವಾಗಿಸಿಕೊಂಡು ಅಧ್ಯಕ್ಷ ಸ್ಥಾನ ತಪ್ಪಿಸಲು ಕೆಲವರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಆಗಿರುವ ಜಿಯಾವುಲ್ಲಾ ಅವರ ಆಯ್ಕೆಗೆ ಮುಸ್ಲಿಂ ಮುಖಂಡರಿಂದಲೇ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ರಾಮನಗರದ ಶಾಸಕರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುವ ಕಾರಣ ಅವರಿಗೆ ಅಧ್ಯಕ್ಷ ಸ್ಥಾನ ನೀಡದಂತೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜಿಯಾವುಲ್ಲಾ ಅವರ ಬೆಂಬಲಕ್ಕೆ ನಿಂತಿದ್ದು ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ. ಮತ್ತೊಂದೆಡೆ ಜೆಡಿಎಸ್‌ನಲ್ಲಿ ಗುರ್ತಿಸಿಕೊಂಡು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಗೊಂಡ ದುಂತೂರು ವಿಶ್ವನಾಥ್ ಅವರಿಗೂ ಅಧ್ಯಕ್ಷ ಸ್ಥಾನ ಬಹುತೇಕ ಖಚಿತವಾಗಿದೆ.
--