

ರಾಮನಗರ
ಚುನಾವಣೆ ಗೆಲ್ಲಲು ಜೆಡಿಎಸ್, ಕಾಂಗ್ರೆಸ್ ವಾಮಮಾರ್ಗ ಅನುಸರಿಸುತ್ತಿವೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ನಗರದ ಗಾಂಧಿನಗರ ವಾರ್ಡ್ನಲ್ಲಿ ರಾಮನಗರ ಬಿಜೆಪಿ ಘಟಕ ವತಿಯಿಂದ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಪರ ಮತಯಾಚಿಸಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಷಸರ್ಪಕ್ಕೆ ಹೋಲಿಸಿ ಲುವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದು ವಿಚಲಿತರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಜಾತಿ ನಿಂದನೆ ಮಾಡಿ ಸಂಸತ್ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಲಿಂಗಾಯತ ಮುಖ್ಯಮಂತ್ರಿಗಳಿಂದಲೇ ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅವರ ಕುಚೇಷ್ಟೆ ತೋರುತ್ತದೆ. ಇವರೆಲ್ಲರ ಇಂತಹ ಹೇಳಿಕೆ, ನಡವಳಿಕೆಗಳಿಂದ ಕಾಂಗ್ರೆಸ್ ದೇಶದಲ್ಲಿ ದಿವಾಳಿ ಅಂಚಿಗೆ ದೂಡಲ್ಪಟ್ಟಿದೆ ಎಂದರು.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬರಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಬಿಜೆಪಿಗೆ ಜನಬೆಂಬಲ ವ್ಯಕ್ತವಾಗಿದೆ. ಬಿಜೆಪಿ 130ರಿಂದ 140 ಸ್ಥಾನಗಳನ್ನು ಪಡೆಯುವ ಮೂಲಕ ಸರ್ಕಾರ ರಚಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಮನಗರದಲ್ಲೂ ಜನ ಬದಲಾವಣೆ ಬಯಸಿದ್ದಾರೆ ಎಂದರು.
ಗಾಂಧಿನಗರ ಅರ್ಕೇಶ್ವರ ಕಾಲನಿ ಸೇರಿ ರಾಮನಗರದ ಹಲವು ಪ್ರದೇಶಗಳಲ್ಲಿ ಪ್ರತಿ ಮನೆಗೆ ತೆರಳಿ ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ಗೌತಮ್ ಮರಿಲಿಂಗೇಗೌಡ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಉಪಾಧ್ಯಕ್ಷ ಆರ್.ವಿ.ಸುರೇಶ್, ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ. ಶಿವಾನಂದ, ಎಸ್ಸಿ ಘಟಕದ ಅಧ್ಯಕ್ಷ ವಿ.ರಾಜು, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್ ಮುಂತಾದವರಿದ್ದರು.