

ಬಿಡದಿ
ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಕರು ರಸ್ತೆ ದಾಟಲು ನಿರ್ಮಾಣ ಮಾಡಿರುವ ಸ್ಕೈ ವಾಕ್ ನಲ್ಲಿ ಅಳವಡಿಸಿರುವ ವಿದ್ಯುತ್ ದೀಪ ಕೆಟ್ಟು ತಿಂಗಳುಗಳೇ ಕಳೆದರು ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿ ಹೆದ್ದಾರಿ ಹಾದು ಹೋಗುತ್ತಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾರ್ವಜನಿಕರು ರಸ್ತೆ ದಾಟಲು ಅನುಕೂಲವಾಗಲಿ ಎಂದು ಸ್ಕೈ ವಾಕ್ ನಿರ್ಮಾಣ ಮಾಡಲಾಗಿತ್ತು. ರಾತ್ರಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಆ ಲೈಟ್ ಕೆಟ್ಟಿದ್ದು ರಾತ್ರಿ ಸ್ಕೆ$ ವಾಕರ್ನಲ್ಲಿ ದಾಟಲು ಸಮಸ್ಯೆಯಾಗುತ್ತಿದೆ.
ಬೆಂಗಳೂರುನಿಂದ ಬರುವ ಮಂದಿ ಪಟ್ಟಣದ ಕಡೆಗೆ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ತೆರಳಲು ಸ್ಕೈ ವಾಕ್ ಬಳಸುತ್ತಾರೆ. ಅದರಲ್ಲಿ ರಾತ್ರಿ ಬೆಂಗಳೂರುನಿಂದ ಕೆಲಸ ಮುಗಿಸಿ ಬರುವ ಜನರು ಮೇಲ್ ಸೇತುವೆ ಬಳಸುತ್ತಾರೆ. ಅಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ, ಮೊಬೈಲ್ ಟಾರ್ಚ್ ಬಳಸಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದು ನಮಗೆ ಬರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಇದರ ನಿರ್ವಹಣೆಯನ್ನು ಅವರೆ ಮಾಡಬೇಕೆಂಬ ಮಾತುಗಳು ಕೇಳಿ ಬಂದಿವೆ.
ಅನೈತಿಕ ಚಟುವಟಿಕೆಗಳ ತಾಣ: ಸ್ಕೈ ವಾಕ್ನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಈ ಜಾಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮದ್ಯಪಾನ ಮಾಡುವುದು ಸೇರಿ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ ವೇಳೆ ಮಹಿಳೆಯರು ದಾಟಲು ಇದರಿಂದ ತೊಂದರೆಯಾಗುತ್ತಿದೆ.
ಸಾರ್ವಜನಿಕರ ಅನುಕೂಲಕ್ಕೆ ಎಂದು ಹೆದ್ದಾರಿಯಲ್ಲಿ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಇದರ ನಿರ್ವಹಣೆ ಯಾರು ಮಾಡುತ್ತಿಲ್ಲ. ರಾತ್ರಿ ವೇಳೆ ನಡೆದುಕೊಂಡು ಹೋಗಲು ಸೂಕ್ತ ಲೈಟ್ ವ್ಯವಸ್ಥೆ ಇಲ್ಲ. ಇದನ್ನು ನಿರ್ವಹಣೆ ಮಾಡಬೇಕಾದ ಹೆದ್ದಾರಿ ಪ್ರಾಧಿಕಾರ ಕೈ ಚಲ್ಲಿ ಕುಳಿತಿದೆ. ಪುರಸಭೆ ಅಧಿಕಾರಿಗಳು ಇತ್ತ ಗಮನ ಕೊಟ್ಟು ಲೈಟ್ ವ್ಯವಸ್ಥೆ ಮಾಡಲಿ.
ಮುತ್ತಣ್ಣ, ಸಾಮಾಜಿಕ ಹೋರಾಟಗಾರ, ಬಿಡದಿ