ರೋಗ ನಿವಾರಕ ಸೀಬೆಗೆ ಹೂಜಿ ರೋಗ ಕಂದು ಬಣ್ಣಕ್ಕೆ ತಿರುಗಿ ಉದುರುವ ಹಣ್ಣು

11-07-bidadi-2
Published on

ಚೇತನ್ ಚಕ್ಕೆರೆ ಬಿಡದಿ

ಆರೋಗ್ಯದ ದೃಷ್ಟಿಯಿಂದ ಹಲವು ರೋಗಗಳ ನಿವಾರಣೆಗೆ ಔಷಧದಂತೆ ಕೆಲಸ ಮಾಡುವ ಸೀಬೆಹಣ್ಣಿಗೇ ರೋಗ ಬಾಧೆ ತಟ್ಟಿದೆ. ಇದರಿಂದಾಗಿ ಸೀಬೆ ಬೆಳೆ ನಂಬಿದ್ದ ರೈತರು ಅತಂತ್ರರಾಗಿರುವುದಲ್ಲದೆ ಲಾಭದ ನಿರೀಕ್ಷೆಯಲ್ಲಿದ್ದವರು ಕಂಗಾಲಾಗಿದ್ದಾರೆ.

ಹೇಳಿ ಕೇಳಿ ಸೀಬೆಹಣ್ಣು ಆರೋಗ್ಯದಾಯಕ ಹಣ್ಣು. ಈ ಹಣ್ಣಿನಲ್ಲಿ ಔಷಧೀಯ ಗುಣಗಳಿದ್ದು ಹಲವು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇಂತಹ ಸೀಬೆಗೆ ಇದೀಗ ರೋಗ ತಗುಲಿ ಹಣ್ಣುಗಳು ಉದುರಲು ಶುರುವಾಗಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸೀಬೆಗೆ ಹೂಜಿ ರೋಗ ಸೀಬೆ ಹಣ್ಣುಗಳಿಗೆ ಸಾಮಾನ್ಯವಾಗಿ ರೋಗಬಾಧಿಸುವುದು ತೀರಾ ಕಡಿಮೆ. ಆದರೆ ಇದೀಗ ಈ ಹಣ್ಣಿಗೂ ಹೂಜಿ ರೋಗ ತಗುಲಿದ್ದು, ವ್ಯಾಪಕವಾಗಿ ಹರಡಲು ಆರಂಭವಾಗಿದೆ. ಹಣ್ಣು ಕಟಾವಿಗೆ ಬಂದಿದ್ದು, ಮಾರುಕಟ್ಟೆಗೆ ಒಯ್ಯುವ ಸಮಯದಲ್ಲಿ ರೋಗ ಕಾಣಿಸಿಕೊಂಡಿರುವುದು ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರನ ಆತಂಕಕ್ಕೆ ಕಾರಣವಾಗಿದೆ.

ಗಿಡದ ಬುಡದಲ್ಲೇ ಬಿದ್ದಿರುವ ಹಣ್ಣು

ಬಿಡದಿ ಭಾಗದ ಹಲವು ಗ್ರಾಮಗಳಲ್ಲಿ ಕೆಲವು ರೈತರು ವಾಣಿಜ್ಯ ಬೆಳೆಯಾಗಿ ಸೀಬೆ ಬೆಳೆಯಲು ಆರಂಭಿಸಿದ್ದಾರೆ. ಈಗ ರೋಗಪೀಡಿತ ಗಿಡಗಳ ಬುಡದಲ್ಲೇ ಹಣ್ಣು ಉದುರುತ್ತಿವೆ. ಹಣ್ಣಿನ ಒಂದು ಭಾಗದಲ್ಲಿ ಕಂದು ಬಣ್ಣದ ಸಣ್ಣ ಕಲೆ ಕಾಣಿಸಿ ನಂತರದ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಣ್ಣನ್ನು ಈ ಕಲೆ ಆವರಿಸಿ ಗಿಡದಿಂದ ಉದುರುತ್ತಿವೆ.

ಹೈದರಾಬಾದ್ ಸಫೆ ತಳಿಗೆ ಬಾಧೆ

ಸೀಬೆಹಣ್ಣುಗಳಲ್ಲಿ ವಿವಿಧ ತಳಿಗಳಿದ್ದು ಇವೆಲ್ಲವೂ ರೈತನಿಗೆ ಆದಾಯ ತರುತ್ತವೆ. ಇತ್ತೀಚಿನ ದಿನಗಳಲ್ಲಿ ತೈವಾನ್ ಸೀಬೆ, ಹೈದರಾಬಾದ್ ಸಫೆ, ಥೈಲ್ಯಾಂಡ್ ಸೀಬೆ ಹೀಗೆ ಹಲವು ತಳಿಗಳಿದ್ದು, ಬಿಡದಿ ಭಾಗದಲ್ಲಿ ತೈವಾನ್ ಹಾಗೂ ಹೈದರಾಬಾದ್ ಸಫೆ ತಳಿಯ ಸೀಬೆ ಹಣ್ಣನ್ನು ಹೆಚ್ಚಾಗಿ ಬೆಳೆದಿದ್ದಾರೆ. ಹೆಗ್ಗಡಗೆರೆ, ಬೈರಮಂಗಲ, ಹಲಸಿನಮರದದೊಡ್ಡಿ ಗ್ರಾಮ ಸೇರಿ ಸುಮಾರು 25 ಎಕರೆ ಭೂಮಿಯಲ್ಲಿ ಸೀಬೆ ಬೆಳೆಯಲಾಗಿದೆ. ಈ ಪೈಕಿ ಹೈದರಾಬಾದ್ ಸೀಬೆ ತಳಿಗೆ ರೋಗ ಕಾಣಿಸಿಕೊಂಡಿದೆ. ಹೆಗ್ಗಡಗೆರೆ ಗ್ರಾಮದ ರೈತ ಶೇಖರ್ ಬೆಳೆದಿರುವ ಎರಡು ಎಕರೆ ಸೀಬೆ, ಹಲಸಿನಮರದೊಡ್ಡಿಯಲ್ಲಿ 3-4 ಎಕರೆ ಜಮೀನಿನಲ್ಲಿ ಹಲವು ರೈತರು ಹೈದರಾಬಾದ್ ಸಫೆ ತಳಿಯನ್ನು ಬೆಳೆದಿದ್ದಾರೆ.

ಮುಕ್ಕಾಲು ಕೆಜಿವರೆಗೆ ತೂಗುವ ಒಂದು ಹಣ್ಣು

ಹೂವು ಬಿಡುವ ಸಮಯದಲ್ಲಿ ಕ್ರಿಮಿನಾಶಕ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಹೂವು ಕಾಯಿ ಆಗಿ ಮಾರುಕಟ್ಟೆಗೆ ಬೆಳೆಯನ್ನು ತೆಗೆದುಕೊಂಡು ಹೋಗಬೇಕಾದ ಸಮಯದಲ್ಲಿ ರೋಗ ಕಾಣಿಸಿಕೊಂಡು ನಷ್ಟ ಅನುಭವಿಸುವಂತಾಗಿದೆ. ಪ್ರತಿ ಕೆಜಿಗೆ ಹೈದರಾಬಾದ್ ಸಫೆ ತಳಿಗೆ ಮಾರುಕಟ್ಟೆಯಲ್ಲಿ 80-100 ರೂ. ದರ ಇದೆ. ಪ್ರತಿ ಹಣ್ಣು 500 ಗ್ರಾಂನಿಂದ ಮುಕ್ಕಾಲು ಕೆಜಿ ಇರುತ್ತವೆ. ಈಗ ಹಣ್ಣುಗಳು ರೋಗಕ್ಕೆ ತುತ್ತಾಗಿವೆ.

ನಾವು ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದು, ಯಾವುದೂ ಕೈಹಿಡಿದಿರಲಿಲ್ಲ. ಹಾಗಾಗಿ ಸೀಬೆ ಬೆಳೆಯುವ ಯೋಚನೆ ಮಾಡಿ 200 ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದೆ. ಕಾಯಿ ಕೂಡ ಬಿಟ್ಟಿತ್ತು. ಈ ಹಿಂದೆ ಉತ್ತಮ ಆದಾಯವೂ ಬಂದಿತ್ತು. ಈ ಬಾರಿ ಬೆಳೆಗೆ ರೋಗ ತಗುಲಿದ್ದು ಹಣ್ಣುಗಳು ಉದುರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ. ಅಲ್ಲದೇ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕಿದೆ.

ಶೇಖರ್, ಹೆಗ್ಗಡಗೆರೆ, ಸೀಬೆ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net