

ಬಿಡದಿ
ಕೆಐಎಡಿಬಿಯಿಂದ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಮಾಡಿಕೊಂಡಿರುವ ಜಮೀನುಗಳ ಮಾಲೀಕರ ಜತೆಗೆ ಹಾಲಿ ಶಾಸಕ ಹಾಗೂ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಕಂಪನಿಯ ಅಕ್ರಮಗಳ ಬಗ್ಗೆ ರಚಿತವಾಗಿದ್ದ ಸದನ ಸಮಿತಿಯ ಮಾಜಿ ಅಧ್ಯಕ್ಷ ಟಿ.ಬಿ.ಜಯಚಂದ್ರ ಚರ್ಚೆ ನಡೆಸಿದರು.
ಈಗಾಗಲೇ ಕೆಐಎಡಿಬಿ ಬೆಂಗಳೂರು-ಮೈಸೂರು ನಡುವೆ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದ ನೈಸ್ ಸಂಸ್ಥೆಗೆ ಬಿಡದಿ ಭಾಗದ ತಾಳಗುಪ್ಪೆ, ಭೀಮೇನಹಳ್ಳಿ, ಬಿಲ್ಲ ಕೆಂಪನಹಳ್ಳಿಗಳಲ್ಲಿ 1998-99ರಲ್ಲಿ ಹಲವು ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿತ್ತು. ಭೂಸ್ವಾಧೀನ ಮಾಡಿಕೊಂಡ ನಂತರ ಪ್ರತಿ ಎಕರೆಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣ ನಿಗದಿಪಡಿಸಿ ನೋಟಿಸ್ ನೀಡಿದ್ದರು. ಇದರ ವಿರುದ್ಧ ರೈತರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ವಿಚಾರವಾಗಿ 2013-18 ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಕಂಪನಿಗೆ ಕೆಐಎಡಿಬಿ ಭೂಸ್ವಾಧೀನ ಮಾಡಿಕೊಂಡಿರುವ ಜಮೀನುಗಳ ಬಗ್ಗೆ ವರದಿ ನೀಡುವಂತೆ ಸಮಿತಿ ರಚನೆ ಮಾಡಿದ್ದರು.
ಅಂದಿನ ಸದನ ಸಮಿತಿ ಇದೇ ಗ್ರಾಮಗಳು ಸೇರಿ ಹಲವು ಕಡೆ ಸ್ಥಳ ಪರಿಶೀಲನೆ ನಡೆಸಿ ನೈಸ್ ಸಂಸ್ಥೆ ಕೇವಲ ರಸ್ತೆಗಷ್ಟೇ ಜಾಗವನ್ನು ಸ್ವಾಧೀನ ಮಾಡಿಕೊಳ್ಳದೆ ವಾಣಿಜ್ಯ ಉದ್ದೇಶದ ಹಿನ್ನೆಲೆಯಲ್ಲೂ ಕೆಐಎಡಿಬಿ ಮೂಲಕ ಹಲವು ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ವರದಿ ನೀಡಿದ್ದರು. ಆದರೆ ವರದಿ ಯಾವುದೇ ತನಿಖೆ ಕಾಣದೆ ಮೂಲೆ ಗುಂಪಾಗಿತ್ತು. ಇದೀಗ ಕೆಐಎಡಿಬಿ ಮತ್ತೆ ಭೂಸ್ವಾಧೀನ ಮಾಡಿಕೊಂಡಿರುವ ರೈತರಿಗೆ ಪ್ರತಿ ಎಕರೆಗೆ ಕಡಿಮೆ ಹಣ ನಿಗದಿ ಮಾಡಿ ನೋಟಿಸ್ ನೀಡಿದ್ದರು.
ಈ ವಿಚಾರವನ್ನು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್ ಟಿ.ಬಿ.ಜಯಚಂದ್ರ ಅವರ ಗಮನಕ್ಕೆ ತಂದು ತಾವು ಸ್ಥಳಕ್ಕೆ ಬಂದು ರೈತರ ಜತೆಗೆ ಮಾತುಕತೆ ನಡೆಸಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಎಂದು ಮನವಿ ಮಾಡಿದ್ದರು.
ಸದನದಲ್ಲಿ ಚರ್ಚೆ ಮಾಡುತ್ತೇನೆ:
ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆಯಾಗಿ ನಾನು ಇತರ ಸದಸ್ಯರ ಜತೆಗೆ ಸ್ಥಳ ಪರಿಶೀಲಿಸಿ ವರದಿ ನೀಡಿದ್ದೆ, ಆದರೆ ಆ ವರದಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೀಗ ಮತ್ತೆ ಈ ಸಮಸ್ಯೆ ರೈತರನ್ನು ಕಾಡುತ್ತಿದೆ. ಹಾಗಾಗಿ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು. ಗ್ರಾಮದ ಮುಖಂಡರಾದ ರಾಮಣ್ಣ, ಪುಟ್ಟಯ್ಯ, ವೀರಭದ್ರಯ್ಯ ಇದ್ದರು.