

ಚೇತನ್ ಚಕ್ಕೆರೆ ಬಿಡದಿ
ಕೆರೆಯಿಂದ ಜಮೀನುಗಳಿಗೆ ನೀರು ಹರಿಯಲು ನಿರ್ಮಿಸಿರುವ ನಾಲೆಗಳು ಹೂಳು ತುಂಬಿ, ಜೊಂಡು ಬೆಳೆದು ಮುಚ್ಚಿಹೋಗಿವೆ. ಇದರಿಂದಾಗಿ ಕೆರೆಯ ನೀರು ಹರಿಯದ ಪರಿಸ್ಥಿತಿ ಉಂಟಾಗಿದೆ.
ಪಟ್ಟಣದ ಬಹುದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ನಲ್ಲಿಗುಡ್ಡೆ ಕೆರೆಯ ನಾಲೆ ಹೂಳು ತುಂಬಿಕೊಂಡು ಗಿಡ-ಗಂಟಿಗಳು ಬೆಳೆದು ನೀರು ಮುಂದೆ ಹರಿದು ಹೋಗದ ಸ್ಥಿತಿಗೆ ಬಂದು ತಲುಪಿದೆ. ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಬೇಕಿದ್ದ ನಾಲೆ ಸರಿಯಾದ ನಿರ್ವಹಣೆ ಇಲ್ಲದೆ, ಇದ್ದೂ ಇಲ್ಲದಂತಾಗಿದೆ. ಹತ್ತಾರು ಹಳ್ಳಿಗಳ ಜಮೀನಿನ ವ್ಯವಸಾಯಕ್ಕೆ ನೀರು ನೀಡುತ್ತಿದ್ದ ನಾಲೆ ಎಷ್ಟು ಅಗಲವಿದೆಯೋ ಅಷ್ಟೂ ಭಾಗ ಹೂಳಿನಿಂದ ತುಂಬಿದೆ. ಇದರಿಂದಾಗಿ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದೆ ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಇದು ಆ ರೈತರು ಆಕ್ರೋಶಕ್ಕೆ ಕಾರಣವಾಗಿದೆ.
ನಲ್ಲಿಗುಡ್ಡೆ ಕೆರೆಯಿಂದ ಪ್ರಾರಂಭವಾಗುವ ನಾಲೆ ಶೆಟ್ಟಿಗೌಡನದೊಡ್ಡಿ, ಕರಿಯಪ್ಪನದೊಡ್ಡಿ, ತಮ್ಮಣ್ಣನದೊಡ್ಡಿ, ಹಲಸಿನಮರದದೊಡ್ಡಿ, ಗೊಲ್ಲಹಳ್ಳಿ, ಕೆಂಚನಕುಪ್ಪೆ, ಬಾನಂದೂರು ರೈತರ ಜಮೀನಿಗೆ ನೀರು ಪೂರೈಸುತ್ತದೆ. ಹೂಳು, ಜೊಂಡು ಬೆಳೆದಿರುವುದರಿಂದ ನೀರು ಮುಂದೆ ಸಾಗದೆ ಹೊರಕ್ಕೆ ಹರಿದು ಪೋಲಾಗುತ್ತಿದೆ.
ಈ ನಾಲೆ ಕೇವಲ ರೈತರ ಜಮೀನಿಗಷ್ಟೆ ಉಪಯೋಗವಾಗುತ್ತಿರಲಿಲ್ಲ. ನಾಲೆ ಸಾಗುವ ಅಕ್ಕಪಕ್ಕದ ಗ್ರಾಮಗಳ ಜನರಿಗೂ ಅನುಕೂಲವಾಗುತ್ತಿತ್ತು. ನಾಲೆಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ತೊಳೆಯಲು ಸೋಪಾನಗಳನ್ನು ಕೂಡ ಮಾಡಲಾಗಿತ್ತು. ದನ ಕರುಗಳಿಗೂ ಕುಡಿಯಲು ನೀರು ಸಿಗುತ್ತಿತ್ತು. ಇದೀಗ ಎಲ್ಲವೂ ಮುಚ್ಚಿಹೋಗಿವೆ.
ನಾಲೆಯಲ್ಲಿ ಗಿಡ-ಗಂಟಿಗಳು ಬೆಳೆದು ನೀರು ಕಲುಷಿತವಾಗುತ್ತಿದ್ದರೆ, ಮತ್ತೊಂದೆಡೆ ತ್ಯಾಜ್ಯದ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಕೆಂಚನಕುಪ್ಪೆ, ತಮ್ಮಣ್ಣನದೊಡ್ಡಿ ಹಾಗೂ ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿ ನೀರನ್ನು ಅದೇ ನಾಲೆಗೆ ಬಿಡಲಾಗುತ್ತಿದೆ. ಇದು ಸಾಲದು ಎಂಬಂತೆ ಕೆಲವರು ಕಸ ತುಂಬಿದ ಕವರ್‌ಗಳನ್ನೂ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ನೀರು ಮತ್ತಷ್ಟು ಕಲುಷಿತವಾಗುತ್ತಿದೆ.