

ಬಿಡದಿ (ರಾಮನಗರ)
ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಗುರುವಾರ ಮಹತ್ವದ ಸಭೆ ನಡೆಸಿದರು.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರ ಜತೆ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದರು. ಪ್ರತಿ ವಾರ್ಡಿನ, ಪ್ರತಿ ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಿ, ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿ. ಜನರಲ್ಲಿ ಪಕ್ಷದ ಪರ ಒಲವು ವ್ಯಕ್ತವಾಗುವ ರೀತಿ ಕೆಲಸ ಮಾಡಿ ಎಂದು ಮುಖಂಡರಿಗೆ ಕಿವಿಮಾತು ಹೇಳಿದರು.
ಬಿಬಿಎಂಪಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಹಾಗಾಗಿ ನಾವು ಸಿದ್ಧರಾಗಿದ್ದು ಚುನಾವಣೆ ಎದುರಿಸಲು ಸಿದ್ಧರಾಗಿರಬೇಕು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವ ಆತಂಕ ಬೇಡ. ಪಕ್ಷಕ್ಕೆ ಸೋಲು ಇದೇ ಮೊದಲಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯ ಇದೆ ಎಂದು ಮುಖಂಡರಿಗೆ ಕುಮಾರಸ್ವಾಮಿ ಆತ್ಮಸ್ಥೈರ್ಯ ತುಂಬಿದರು.
ಗುಂಪುಗಾರಿಕೆ ಸಹಿಸಲ್ಲ
ಪಕ್ಷದ ಮುಖಂಡರಲ್ಲಿ ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಬೇಡ. ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುವವರಷ್ಟೇ ಬೇಕು. ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವುದಿಲ್ಲ. ಯಾರನ್ನೋ ಮೆಚ್ಚಿಸುವ ರೀತಿ ಕೆಲಸ ಮಾಡುವ ಅಗತ್ಯವಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ. ಪಕ್ಷವನ್ನು ಇನ್ನೂ ತಳಮಟ್ಟಕ್ಕೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡ್ಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ ಎಂದು ವಿಧಾನಸಭೆ ಚುನಾವಣೆ ಸೋಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರನ್ನು ಎಚ್ಡಿಕೆ ತರಾಟೆಗೆ ತೆಗೆದುಕೊಂಡರು.
ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿ ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.