ಎಚ್ಡಿಕೆ ದಂಪತಿಯಿಂದ ಚಂಡಿಕಾಯಾಗ

03-03-bidadi-1
Published on

ಬಿಡದಿ (ರಾಮನಗರ): ಚುನಾವಣೆ ಹೊಸ್ತಿಲಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಕೇತುಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಶುಕ್ರವಾರ ನೂರಾರು ಪುರೋಹಿತರ ಸಮ್ಮುಖದಲ್ಲಿ ಯಾಗ ಯಜ್ಞಗಳನ್ನ ಕುಮಾರಸ್ವಾಮಿ ಹಮ್ಮಿಕೊಂಡಿದ್ದಾರೆ.

ರಾಜ್ಯಾದ್ಯಂತ ನಡೆಸಿದ ಪಂಚರತ್ನ ಯಾತ್ರೆಯ ಯಶಸ್ಸಿನ ಹಿನ್ನೆಲೆಯಲ್ಲಿ ಈ ಯೋಜನೆಗಳ ಜಾರಿಗೆ  ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆರೋಗ್ಯ ಚೇತರಿಕೆಗೆ ಸಂಭವಿಸಿದಂತೆ ಎಚ್.ಡಿ.ಕೆ ದಂಪತಿ ಪೂಜೆ ಪುನಸ್ಕಾರಗಳನ್ನ ಆರಂಭಿಸಿದ್ದಾರೆ.  ಸುಮಾರು ೯ ದಿನಗಳ ವರೆಗೆ ನಿರಂತರವಾಗಿ ಯಾಗಗಳು ನಡೆಯಲಿವೆ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಯಾಗದಲ್ಲಿ ಭಾಗವಹಿಸಿ ಪೂಜೆ ಸಲ್ಲಿಕೆ ಮಾಡಿದರು.

೯ ದಿನಗಳ ಕಾಲ ಶತ ಚಂಡಿಕಾ ಯಾಗ, ಕೋಟಿ ಮೃತ್ಯುಂಜಯ ಪೂಜೆಗಳು ಜರುಗಲಿವೆ. ಹೇಳಿ ಕೇಳಿ ಕೇತುಗಾನಹಳ್ಳಿಯ ತೋಟದ ಮನೆ ಕುಮಾರಸ್ವಾಮಿ ಅವರಿಗೆ ಮೆಚ್ಚಿನ ಮನೆಯಾದ ಹಿನ್ನೆಲೆಯಲ್ಲಿ ಕುಟುಂಬದವರ ಆರೋಗ್ಯ ಹಾಗೂ ಪಕ್ಷದ ಯಶಸ್ಸಿಗಾಗಿ ಪೂಜೆ ಮಾಡಿಸಲಾಗುತ್ತಿದೆ. ಎಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ, ರೇವತಿ ಪೂಜೆಯಲ್ಲಿ ಭಾಗಿಯಾಗಿದ್ದರು.

ತೆಲಂಗಾಣದ ಪುರೋಹಿತರು: ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ಯಾಗದಲ್ಲಿ ಪಕ್ಕದ ತೆಲಂಗಾಣ ರಾಜ್ಯದ ನುರಿತ 300 ಕ್ಕು ಹೆಚ್ಚು ಪುರೋಹಿತರು ಯಾಗಗಳನ್ನ ನೆಡಸುತ್ತಿದ್ದು, ಗುರುವಾರ ರಾತ್ರಿಯೆ ತೆಲಂಗಾಣದಿಂದ ಬಿಡದಿಯ ತೋಟದ ಮನೆಗೆ ಆಗಮಿಸಿದ್ದರು. ಇವರೆಲ್ಲರು ಉಳಿದುಕೊಳ್ಳಲು ತೋಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್. ಚಂದ್ರಶೇಖರ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಉತ್ತಮ ಸ್ನೇಹ ಬಂದಾವ್ಯ ಇರುವ ಸ್ವತಃ ಚಂದ್ರಶೇಖರ್ ಅವರೆ ಪುರೋಹಿತರನ್ನ ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net