

500ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಣೆ ಆಹಾರ, ಮನರಂಜನೆ ಕ್ಷೇತ್ರದಲ್ಲೂ ಹೆಸರು
ಚೇತನ್ ಚಕ್ಕೆರೆ ಬಿಡದಿ
ರಾಜ ಮಹಾರಾಜರ ಕಾಲದಲ್ಲಿ ಈ ಹಳ್ಳಿಗೆ ಹೆಸರು ನಾಮಕರಣವಾಗಿತ್ತು. ತದನಂತರದದಲ್ಲಿ ಹಳ್ಳಿ ಪಟ್ಟಣವಾಗಿ ಬೆಳೆದು ದೇಶ-ವಿದೇಶಗಳಲ್ಲಿ ವಿವಿಧ ಕಾರಣಗಳಿಂದ ಪ್ರಸಿದ್ಧಿ ಪಡೆದುಕೊಂಡು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಹಾಗಾದರೆ ಯಾವುದು ಈ ಪಟ್ಟಣ ಅಂತೀೀರಾ ಈ ವರದಿ ಓದಿ.
ಹೌದು.... ಒಂದು ಗ್ರಾಮಕ್ಕಾಗಲಿ ಒಂದು ತಾಲೂಕಿಗಾಗಲಿ ಹೆಸರು ಬರಬೇಕಾದರೆ ಅಲ್ಲೊಂದು ಇತಿಹಾಸ ಇರಲೇ ಬೇಕು. ಅದೇ ರೀತಿ ಇಂದಿನ ಬಿಡದಿ ಎಂಬ ಮೂರಕ್ಷರದ ಪಟ್ಟಣದ ಹೆಸರು ನಾಮಕರಣ ಆಗಬೇಕಾದರೆ ತನ್ನದೆ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಬಿಡಾರ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ಈ ಗ್ರಾಮ ಇಂದು ಬಿಡದಿ ಪಟ್ಟಣವಾಗಿ ಬೆಳೆದಿದೆ.
ಅಂದು ಮೈಸೂರಿನ ಮಹಾರಾಜರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು. ಆ ಕಾಲಘಟ್ಟದಲ್ಲಿ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ದಿನಗಟ್ಟಲೆ ಸಂಚಾರ ಮಾಡುವ ಸ್ಥಿತಿ ಇತ್ತು. ಹಾಗಾಗಿ ಮೈಸೂರಿನಿಂದ ಬೆಂಗಳೂರಿಗೆ ಹೊರಟ ರಾಜರು ಮಾರ್ಗ ಮಧ್ಯೆ ವಿಶ್ರಾಂತಿ ಪಡೆದು, ನಂತರ ಮುಂದೆ ಕ್ರಮಿಸಬೇಕಾಗಿತ್ತು. ಹಾಗಾಗಿ ಇಂದಿನ ಬಿಡದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಹಾಗೂ ರಾತ್ರಿ ಕಳೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಡಾರ ಎಂಬ ಹೆಸರನ್ನು ಈ ಪಟ್ಟಣಕ್ಕೆ ನಾಮಕರಣ ಮಾಡಿದ್ದರು. ಇನ್ನೊಂದು ವಿಶೇಷ ಅಂದರೆ ಪಟ್ಟಣದ ಕೂಗಳತೆ ದೂರದಲ್ಲಿ ರಾಜರು ವಿಶ್ರಾಂತಿ ಪಡೆಯಲು ಛತ್ರಗಳನ್ನು ನಿರ್ಮಾಣ ಮಾಡಿದ್ದರು. ಹಾಗಾಗಿ ಇಂದಿಗೂ ಆ ಗ್ರಾಮ ಛತ್ರ ಗ್ರಾಮ ಎಂದೆ ಹೆಸರು ಹೊಂದಿದೆ.
ಬಿಡಾರ ಎಂಬ ಹೆಸರಿನಲ್ಲಿ ಉದಯವಾದ ಈ ಗ್ರಾಮ ಇಂದು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಬಹು ರಾಷ್ಟ್ರೀಯ ಕಂಪನಿಗಳು ಈ ಭಾಗದಲ್ಲಿ ಸ್ಥಾಪಿತವಾಗಿವೆ. ಮನರಂಜನಾ ಕ್ಷೇತ್ರ ಹೊಂದಿದೆ. ಅಲ್ಲದೆ ತಿಂಡಿ ತಿನಿಸಿನಲ್ಲೂ ದೊಡ್ಡ ಹೆಸರು ಮಾಡಿದೆ.
ವಿದೇಶಿ ಕಂಪನಿಗಳ ಸ್ಥಾಪನೆ: ಈ ಪಟ್ಟಣ ಇಂದು ಬಹುದೊಡ್ಡ ಕೈಗಾರಿಕಾ ಪ್ರದೇಶ ಹೊಂದಿದೆ. ಇಲ್ಲಿ ಕೇವಲ ದೇಶೀಯ ಕಾರ್ಖಾನೆ ಅಲ್ಲದೆ ಹೊರ ದೇಶದ ಕಂಪನಿ ಕಾರ್ಖಾನೆಗಳು ಸಹ ತಲೆ ಎತ್ತಿವೆ. ಇದರಲ್ಲಿ ವಿದೇಶಿ ಕಾರ್ಖಾನೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಕಾರುಗಳ ಉತ್ಪಾದನೆ ಘಟಕ ಕೂಡ ಇಲ್ಲೆ ಇದೆ. ಉಳಿದಂತೆ ಬಾಷ್, ಕೋಕಾ ಕೋಲಾ, ಬ್ರಿಟಾನಿಯಾ ಸೇರಿ ಹಲವು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 500ಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶದ ಕಂಪನಿಗಳು ನೆಲೆ ಕಂಡಿವೆ.
ಮನರಂಜನೆ ಕ್ಷೇತ್ರದಲ್ಲಿ ಮುನ್ನುಡಿ:
ಬಿಡದಿ ಮನರಂಜನೆ ಕ್ಷೇತ್ರದಲ್ಲೂ ಹೆಸರು ಮಾಡಿದೆ. ಪ್ರತಿಷ್ಠಿತ ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ ಕೂಡ ಇದೇ ಪಟ್ಟಣದಲ್ಲಿದೆ. ನೂರಾರು ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತವಾಗಿ ದೇಶದ ಬಹುದೊಡ್ಡ ಮನರಂಜನೆ ಪಾರ್ಕ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ.
ಇಡ್ಲಿಗೆ ಮಾರು ಹೋಗದವರೆ ಇಲ್ಲ:
ತಿಂಡಿ ತನಿಸುವಿನಲ್ಲು ಸಹ ಪ್ರಸಿದ್ಧಿ ಪಡೆದಿದೆ. ಬಿಡದಿಯ ತಟ್ಟೆ ಇಡ್ಲಿ ಸವಿಯದೆ ಇರುವವರೆ ಇಲ್ಲ. ಬಿಡದಿ ತಟ್ಟೆ ಇಡ್ಲಿ ಅಂದರೆ ಸಾಕು ಜನರು ಮುಗಿಬೀಳುತ್ತಾರೆ. ಸುಮಾರು 70ರ ದಶಕದಿಂದಲೂ ಇಲ್ಲಿನ ಇಡ್ಲಿ ೇಮಸ್. ಇಡ್ಲಿ ತಿನ್ನುವುದಕ್ಕೆಂದೇ ದೂರದ ಊರುಗಳಿಂದ, ಜಿಲ್ಲೆಗಳಿಂದ ಜನ ಬರುತ್ತಾರೆ. ಇಡ್ಲಿ ಸವಿಯಲು ಬರುವ ಜನರಿಗೆ ಉಣ ಬಡಿಸಲು ಸಾಕಷ್ಟು ಹೋಟೆಲ್‌ಗಳು ಇವೆ. ರಾಜಕಾರಣಿಗಳು, ವರನಟ ಡಾ.ರಾಜ್‌ಕುಮಾರ್ ಆದಿಯಾಗಿ ಬಹಳಷ್ಟು ಚಿತ್ರ ನಟ ನಟಿಯರು ಬಂದು ತಟ್ಟೆ ಇಡ್ಲಿ ಸವಿದಿರುವುದು ವಿಶೇಷ.
ಬಿಡದಿ ಪಟ್ಟಣ ಈ ಹಿಂದೆ ಮೈಸೂರಿನ ಮಹಾರಾಜರು ತಂಗುವ ಬಿಡಾರವಾಗಿತ್ತು. ಇಂದು ಬಿಡಾರ ಹೋಗಿ ಬಿಡದಿಯಾಗಿದೆ. ಬೆಂಗಳೂರಿಗೆ ಹತ್ತಿರ ಇರುವ ಕಾರಣ ಹಲವು ಕೈಗಾರಿಕೆಗಳು ಇವೆ. ವಿದೇಶಿ ಕಂಪನಿಗಳು ಸ್ಥಾಪಿತವಾಗಿ ವಿದೇಶದ ಮಟ್ಟದಲ್ಲಿ ಬಿಡದಿ ಹೆಸರು ಗಳಿಸಿದೆ.
ಮುತ್ತಣ್ಣ, ಇತಿಹಾಸಕಾರ ಬಿಡದಿ
ಬಿಡದಿಯ ಹೆಸರು ಮತ್ತಷ್ಟು ಪ್ರಚಲಿತಕ್ಕೆ ಬರಲು ಇಲ್ಲಿನ ತಟ್ಟೆ ಇಡ್ಲಿ ಕೂಡ ಪ್ರಮುಖವಾದದ್ದು. ನಮ್ಮ ತಾತನ ಕಾಲದಿಂದ ಈ ಇಡ್ಲಿ ಹೋಟೆಲ್ ಉದ್ಯಮ ನಡೆಸಿಕೊಂಡು ಬರಲಾಗುತ್ತಿದೆ. ಹಿರಿಯರ ಕಸುಬನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಪಟ್ಟಣದಲ್ಲಿ ಹಲವಾರು ತಟ್ಟೆ ಇಡ್ಲಿ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ತಟ್ಟೆ ಇಡ್ಲಿ ದೇಶ-ವಿದೇಶಗಳಲ್ಲೂ ಜನಪ್ರಿಯವಾಗಿದೆ.
ನಂದಗುರು, ತಟ್ಟೆ ಇಡ್ಲಿ ಹೋಟೆಲ್ ಮಾಲೀಕ