

ರಾಮನಗರ
ತಾಲೂಕಿನ ಕಸಬಾ ಹೋಬಳಿ ಹರೀಸಂದ್ರ ಗ್ರಾಮದ ಬಳಿ ಖಾಸಗಿ ಖರಾಬು ಜಮೀನಿನಲ್ಲಿ ಉರುಳಿಗೆ ಸಿಲುಕಿದ ಎಂಟು ತಿಂಗಳ ಹೆಣ್ಣು ಕರಡಿ ಮರಿ ಮೃತಪಟ್ಟಿರುವುದು ಶನಿವಾರ ನಡೆದಿದೆ.
ಹರೀಸಂದ್ರ ಗ್ರಾಮದ ಜಮೀನು ಒಂದರಲ್ಲಿ ಬೇಟೆಗಾರರು ಕಾಡುಹಂದಿ, ಮೊಲ ಬೇಟೆಯಾಡಲು ಉರುಳು ಹಾಕಿದ್ದರು. ಆಹಾರ ಅರಸಿ ಬಂದ ಕರಡಿ ಮರಿ ಈ ಉರುಳಿಗೆ ಸಿಲುಕಿ ಮೃತಪಟ್ಟಿದೆ.
ಹರೀಸಂದ್ರ ಅಕ್ಕಪಕ್ಕ ಅರಣ್ಯ ಪ್ರದೇಶವಿದ್ದು, ಕರಡಿಗಳು ವಾಸವಾಗಿವೆ. ಜತೆಗೆ ಕಾಡುಹಂದಿ, ನವಿಲು, ಚಿರತೆ, ಮೊಲ ಇವೆ. ಈ ಪ್ರದೇಶದಲ್ಲಿ ಹಂದಿ ಬೇಟೆಗೆ ಉರುಳು ಹಾಕುತ್ತಾರೆ ಎಂದು ತಿಳಿದು ಬಂದಿದೆ. ಕರಡಿ ಮರಿ ಉರುಳಿಗೆ ಸಿಲುಕಿ ಮೃತಪಟ್ಟಿರುವ ವಿಷಯವನ್ನು ಅರಣ್ಯ ಇಲಾಖೆಗೆ ಸ್ಥಳೀಯರು ಶನಿವಾರ ಬೆಳಗ್ಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ಉರುಳಿನಿಂದ ಕರಡಿ ಮರಿ ಬೇರ್ಪಡಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವೈದ್ಯ ಡಾ. ಉಮಾಶಂಕರ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದರು. ಕರಡಿ ಕಳೇಬರವನ್ನು ಸುಡಲಾಯಿತು.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಾಸು ಮತ್ತು ಅರಣ್ಯ ರಕ್ಷಕ ಮಂಜು ಇದ್ದರು.
ಮೊಲ, ಕಾಡು ಹಂದಿ ಬೇಟೆ ಆಡುವವರು ಉರುಳು ಹಾಕಿ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಇದರಿಂದ ಅನೇಕ ಪ್ರಾಣಿಗಳ ಪ್ರಾಣಕ್ಕೆ ತೊಂದರೆ ಉಂಟಾಗುತ್ತಿದೆ, ಈ ರೀತಿ ಉರುಳು ಹಾಕುವವರು ಕಂಡು ಬಂದರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ದಿನೇಶ್, ವಲಯ ಅರಣ್ಯಾಧಿಕಾರಿ, ರಾಮನಗರ