ಬಿಡಿಸಿಸಿ ಗದ್ದುಗೆಗೆ ಪೈಪೋಟಿ ಕೈ ಬೆಂಬಲಿತ ಪ್ರಭಾವಿ ನಿರ್ದೇಶಕರ ನಡುವೆ ಸ್ಪರ್ಧೆ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಎಸ್.ರವಿ

2023-07-24_154937
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಿಡಿಸಿಸಿ ಬ್ಯಾಂಕ್‌ನ ಗದ್ದುಗೆ ಹಿಡಿಯಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದ್ದು, ಜಿಲ್ಲೆಯ ನಿರ್ದೇಶಕರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಬೆಂಗಳೂರು ನಗರ, ಗ್ರಾವಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡ ಸಹಕಾರ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಹನುಮಂತಯ್ಯ ರಾಜೀನಾಮೆ ನೀಡಿದ್ದು, ಈ ಸ್ಥಾನ ಶ್ರೀದಲ್ಲೇ ಖಾಲಿಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಾನ ಪಡೆಯುವ ಸಲುವಾಗಿ ಜಿಲ್ಲೆಯ ಇಬ್ಬರು ಪ್ರಭಾವಿ ನಿರ್ದೇಶಕರ ನಡುವೆ ಪೈಪೋಟಿ ನಡೆದಿದೆ.

ಯಾರು ಆ ನಿರ್ದೇಶಕರು?: ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಾಲಿ ವಿಧಾನ ಪರಿಷತ್ ಸದಸ್ಯರೂ ಆದ ಕನಕಪುರದ ಎಸ್.ರವಿ ಮತ್ತೊಮ್ಮೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ರೀತಿ ಮತ್ತೊಬ್ಬ ಪ್ರಭಾವಿ ನಿರ್ದೇಶಕ ವಾಗಡಿಯ ಎಚ್.ಎನ್.ಅಶೋಕ್ ಸಹ ಅಧ್ಯಕ್ಷ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಎಸ್.ರವಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರ ಸಹೋದರ ಸಂಬಂಧಿ. ಎಚ್.ಎನ್.ಅಶೋಕ್ ವಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಚಿಕ್ಕಪ್ಪನ ಮಗ.

ಅಧ್ಯಕ್ಷ ರಾಜೀನಾಮೆ: ಹಾಲಿ ಅಧ್ಯಕ್ಷ ಹನುಮಂತಯ್ಯ ತಮ್ಮ ಸ್ಥಾನಕ್ಕೆ ಜು.12ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದ ಹನುಮಂತಯ್ಯ ಈಗ ರಾಜೀನಾಮೆ ನೀಡಿದ್ದು ಇವರ ರಾಜೀನಾಮೆ ಬಹುತೇಕ ಜು.26ರಂದು ಅಂಗೀಕಾರವಾಗಲಿದೆ. ಇದಾದ ನಂತರ ಚುನಾವಣಾ ಪ್ರಕ್ರಿಯೆಗಳು ನಡೆದು, ಹೊಸ ಅಧ್ಯಕ್ಷರ ಆಯ್ಕೆಗೆ ಒಂದು ತಿಂಗಳ ಅವಧಿ ತೆಗೆದುಕೊಳ್ಳಲಿದ್ದು, ಈ ಸಂದರ್ಭದಲ್ಲಿ ಹಂಗಾಮಿ ಅಧ್ಯಕ್ಷರಾಗಿ ರಾಮನಗರದವರೇ ಆದ ಬಿಡಿಸಿಸಿ ಬ್ಯಾಂಕ್ ಹಾಲಿ ಉಪಾಧ್ಯಕ್ಷ ಎರೇಹಳ್ಳಿ ಮಂಜು ಕಾರ್ಯನಿರ್ವಹಿಸಲಿದ್ದಾರೆ.

ಯಾರಿಗೆ ಒಲಿಯಲಿದೆ?: ಬಿಡಿಸಿಸಿ ಬ್ಯಾಂಕ್‌ನಲ್ಲಿ ರಾಮನಗರ ಜಿಲ್ಲೆಯವರ ಪ್ರಭಾವವೇ ಹೆಚ್ಚು. ಈ ಬಾರಿಯೂ ಇದು ಸಾಬೀತಾಗಲಿದೆ. ಆದರೆ, ಯಾರು ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳುವುದು ಕಷ್ಟವಾಗಿದೆ. ಒಂದೆಡೆ ಎಸ್.ರವಿ, ಡಿ.ಕೆ.ಶಿವಕುವಾರ್ ಮತ್ತು ಸುರೇಶ್ ಅವರ ಹತ್ತಿರದ ಸಂಬಂಧಿ ಆಗಿರುವುದರಿಂದ ಇವರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಹೇಳಲಾಗುತ್ತಿದೆ. ಸಚಿವ ಸ್ಥಾನ ವಂಚಿತರಾಗಿರುವ ವಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಪಟ್ಟು ಹಿಡಿದರೆ ಎಚ್.ಎನ್.ಅಶೋಕ್ ಅಧ್ಯಕ್ಷರಾಗಬಹುದು. ಆದರೆ, ಅಧ್ಯಕ್ಷರ ಆಯ್ಕೆಯಲ್ಲಿ ಡಿ.ಕೆ.ಸುರೇಶ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ಇದ್ದು, ಇದು ಬಮುಲ್ ಅಧ್ಯಕ್ಷರ ಆಯ್ಕೆಯಲ್ಲಿಯೂ ಸಾಬೀತಾಗಿದೆ.

ಕೃಷ್ಣಮೂರ್ತಿ ಲಾಬಿ?

ರಾಮನಗರದ ಇಬ್ಬರು ನಿರ್ದೇಶಕರು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ನಡುವೆಯೇ ಹೊಸಕೋಟೆಯ ಕೃಷ್ಣಮೂರ್ತಿ ಸಹ ತಮ್ಮದೇ ವಾರ್ಗದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇವರ ಬೆಂಬಲಕ್ಕೆ ವಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರೂ ಆದ ಎಂ.ವೀರಪ್ಪ ಮೊಯ್ಲಿ, ಇನ್ನೊಬ್ಬ ಹಿರಿಯ ನಾಯಕ ವೆಂಕಟರಮಣ ಸಹ ನಿಂತಿದ್ದಾರೆ. ಮೂರು ಬಾರಿ ನಿರ್ದೇಶಕರಾಗಿರುವ ಕೇಶವಮೂರ್ತಿ ತಮಗೆ ಅಧ್ಯಕ್ಷ ಸ್ಥಾನ ಕೊಡಿ ಎನ್ನುವ ಬೇಡಿಕೆಯನ್ನು ಪಕ್ಷದ ಮುಂದಿಟ್ಟಿದ್ದು, ಇವರಿಗೆ ಅಧ್ಯಕ್ಷ ಸ್ಥಾನ ಒಲಿಯುವುದೇ? ಕಾದು ನೋಡಬೇಕಿದೆ.

ಸಂಖ್ಯಾಬಲ

ಬಿಡಿಸಿಸಿಯಲ್ಲಿ ಒಟ್ಟು 21 ಸದಸ್ಯ ಬಲವಿದೆ. ಇದರಲ್ಲಿ ಕಾಂಗ್ರೆಸ್ ಬೆಂಬಲಿತರು 9 ಮಂದಿ ಇದ್ದರೆ, ಜೆಡಿಎಸ್ 3, ಬಿಜೆಪಿ ಬೆಂಬಲಿತ ಸಂಖ್ಯೆ ನಾಮ ನಿರ್ದೇಶಿತ ನಿರ್ದೇಶಕರೂ ಸೇರಿ ಒಟ್ಟು 7 ಮಂದಿ ಇದ್ದಾರೆ. ಒಬ್ಬ ಪಕ್ಷೇತರರಿದ್ದರೆ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಅವರಿಗೂ ಮತ ಚಲಾವಣೆ ಹಕ್ಕಿದೆ. ಇದರಲ್ಲಿ ಒಟ್ಟು 11 ಮತಗಳನ್ನು ಪಡೆದುಕೊಂಡವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net