

ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಉಪಾಧ್ಯಕ್ಷ ಸ್ಥಾನಕ್ಕೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಜಿಲ್ಲೆಯ ಇಬ್ಬರು ನಿರ್ದೇಶಕರ ನಡುವೆ ಪೈಪೋಟಿ ಆರಂಭಗೊಂಡಿದೆ.
ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯನ್ನು ಒಳಗೊಂಡ ಬಿಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರದ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು, ಇದರ ಉಪಾಧ್ಯಕ್ಷರಾಗಿದ್ದ ನೆಲಮಂಗಲದ ನಿರ್ದೇಶಕ ಪಟ್ಟಾಭಿರಾಮ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಲಾಬಿ ಆರಂಭಗೊಂಡಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿಗಳು ಅಧಿಕಾರ ಪಡೆದುಕೊಳ್ಳಲು ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ರಾಮನಗರ ವೈ.ಎಚ್.ಮಂಜು ಮತ್ತು ಜೆಡಿಎಸ್ ಬೆಂಬಲಿತ ನಿರ್ದೇಶಕ ಚನ್ನಪಟ್ಟಣದ ಕುಕ್ಕೂರು ದೊಡ್ಡಿ ಜಯರಾಂ ನಡುವೆ ಪೈಪೋಟಿ ಏರ್ಪಟ್ಟಿದ್ದು, ಬಹುತೇಕ ಮಾ.2ರಂದು ನಡೆಯುವ ಚುನಾವಣೆಯಲ್ಲಿ ಇವರ ಹಣೆಬರಹ ನಿರ್ಧಾರವಾಗಲಿದೆ.
ಬಲಾಬಲ
ಬಿಡಿಸಿಸಿಯಲ್ಲಿ ಒಟ್ಟು 21 ಸದಸ್ಯ ಬಲವಿದೆ. ಇದರಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದರೆ, ಜೆಡಿಎಸ್ ಬೆಂಬಲಿತರ ಸಂಖ್ಯೆ 3, ಬಿಜೆಪಿ ಬೆಂಬಲಿತ ಸಂಖ್ಯೆ ನಾಮ ನಿರ್ದೇಶಿತ ನಿರ್ದೇಶಕರೂ ಸೇರಿ ಒಟ್ಟು 7 ಸದಸ್ಯರಿದ್ದಾರೆ. ಓರ್ವ ಪಕ್ಷೇತರರಿದ್ದರೆ, ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಅವರಿಗೂ ಮತ ಚಲಾವಣೆ ಹಕ್ಕಿದೆ. ಇದರಲ್ಲಿ ಒಟ್ಟು 11 ಮತಗಳನ್ನು ಪಡೆದುಕೊಂಡವರು ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಬಿಜೆಪಿ - ಕಾಂಗ್ರೆಸ್ ಮೈತ್ರಿ?
ಪ್ರಸ್ತುತ ರಾಜೀನಾಮೆ ನೀಡಿರುವ ಪಟ್ಟಾಭಿರಾಮಯ್ಯ ಅವರು ನೆಲಮಂಗಲ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ನಂತರ ಉಪಾಧ್ಯಕ್ಷರಾಗಿದ್ದರು. ಈಗ ಮತ್ತೆ ಜೆಡಿಎಸ್ ಸದಸ್ಯರಲ್ಲಿ ಒಬ್ಬರಾದ ಚನ್ನಪಟ್ಟಣದ ಕುಕ್ಕೂರುದೊಡ್ಡಿ ಜಯರಾಂ ಅಧಿಕಾರ ಪಡೆಯಬೇಕು ಎನ್ನುವ ಯತ್ನದಲ್ಲಿ ಇದ್ದಾರೆ. ಜಿಲ್ಲೆಯ ಮಾಗಡಿ ನಿರ್ದೇಶಕ ಎಚ್.ಎನ್.ಅಶೋಕ್, ಕನಕಪುರದ ಎಸ್.ರವಿ, ರಾಮನಗರದ ಮಂಜು ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, ಮಂಜು ಬಿಜೆಪಿ ಬೆಂಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಕಸರತ್ತು ನಡೆಸಿದ್ದಾರೆ. ಇವರ ಈ ಯತ್ನಕ್ಕೆ ಮಾಗಡಿಯ ಎಚ್.ಸಿ. ಬಾಲಕೃಷ್ಣ ಸಹ ಕೈಜೋಡಿಸಿರುವುದು ವಿಶೇಷ. ಈ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ನಿರ್ದೇಶಕರೊಂದಿಗೆ ಮಾತುಕತೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್‌ಗೆ ತ್ರಾಸು
ಒಂದು ವೇಳೆ ಬಿಜೆಪಿ - ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟರೆ ಖಂಡಿತವಾಗಿ ಜೆಡಿಎಸ್ ಯತ್ನಕ್ಕೆ ಹಿನ್ನಡೆಯಾಗಲಿದೆ. ಜೆಡಿಎಸ್‌ನ ಕೇವಲ ಮೂರು ಸದಸ್ಯರು ಇದ್ದು, ಗೆಲುವಿಗೆ ಬೇಕಾದ ಇನ್ನೂ 8 ಮಂದಿಯನ್ನು ತಮ್ಮತ್ತ ಸೆಳೆಯಬೇಕಿದೆ. ಇದರ ಪ್ರಯತ್ನವೂ ನಡೆದಿದ್ದು, ಇದರಲ್ಲಿ ಆಕಾಂಕ್ಷಿ ಆಗಿರುವ ಕುಕ್ಕೂರುದೊಡ್ಡಿ ಜಯರಾಂ ಎಷ್ಟು ಯಶಸ್ವಿ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ನೇಮಕಾತಿ ಪ್ರಗತಿಯಲ್ಲಿ
ಬಿಡಿಸಿಸಿ ಬ್ಯಾಂಕ್‌ನಲ್ಲಿ ಖಾಲಿ ಇರುವ 90ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರತಿಕ್ರಿಯೆ ಆರಂಭಗೊಂಡಿದೆ. ಅಧ್ಯಕ್ಷರು, ಉಪಾಧ್ಯಕ್ಷ ಸೇರಿ ಒಟ್ಟು 5 ಸದಸ್ಯರ ಆಯ್ಕೆ ಸಮಿತಿ ಈ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡುವ ಜವಾಬ್ದಾರಿ ಹೊಂದಿದೆ. ಹಾಲಿ ಉಪಾಧ್ಯಕ್ಷರ ರಾಜೀನಾಮೆಯಿಂದ ಆಯ್ಕೆ ಸಮಿತಿಯ ಒಂದು ಹುದ್ದೆ ಖಾಲಿ ಇದ್ದು, ಇದಕ್ಕಾಗಿ ಈ ಬಾರಿ ಉಪಾಧ್ಯಕ್ಷ ಚುನಾವಣೆ ಕಾವು ಪಡೆದುಕೊಂಡಿದೆ.
ಯೋಗೇಶ್ವರ್ ಬೆಂಬಲ
ಈ ಎಲ್ಲ ಬೆಳವಣಿಗೆ ನಡುವೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಚನ್ನಪಟ್ಟಣ ಕ್ಷೇತ್ರದ ತಮ್ಮ ರಾಜಕೀಯ ವಿರೋಧಿ ಪಾಳಯದಲ್ಲಿರುವ ಕುಕ್ಕೂರುದೊಡ್ಡಿ ಜಯರಾಂ ಅವರಿಗೆ ಈ ಹುದ್ದೆ ದೊರೆಯದಂತೆ ಮಾಡಲು ಪರೋಕ್ಷವಾಗಿ ಆಖಾಡಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ. ಜಯರಾಂ ಅವರಿಗೆ ವಿರೋಧವಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚುನಾವಣೆ ರಂಗು ಪಡೆದುಕೊಂಡಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಕುತೂಹಲ ಮೂಡಿಸಿದೆ.