ಸ್ವಾರ್ಥಕ್ಕಾಗಿ ಮಾನವೀಯ ಮೌಲ್ಯ ಮರೆಯದಿರಿ ಕುಂಬಳಗೋಡು ಬಸವ ಗಂಗೋತ್ರಿ ಚನ್ನಬಸವೇಶ್ವರ ಜ್ಞಾನಪೀಠದ ಶ್ರೀ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಅಭಿಪ್ರಾಯ

23 KKP 05
Published on

ಕನಕಪುರ

ಸಮಾಜ ಬದಲಾವಣೆಯಾದಾಗ ಮಾತ್ರ ಸುಧಾರಣೆಯಾಗಲು ಸಾಧ್ಯ. ಮನುಷ್ಯರಲ್ಲಿ ಮಾನವ ಧರ್ಮ ಸ್ಥಾಪನೆಯಾದರೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ಕುಂಬಳಗೋಡು ಬಸವ ಗಂಗೋತ್ರಿ ಚನ್ನಬಸವೇಶ್ವರ ಜ್ಞಾನಪೀಠದ ಶ್ರೀಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಾತನೂರು ಸಮೀಪದ ದಾಳಿಂಬ ಗ್ರಾಮದಲ್ಲಿ  ಗುರುಬಸವೇಶ್ವರ ಪ್ರಾರ್ಥನಾ ಮಂದಿರ ಲೋಕಾರ್ಪಣೆ ಮತ್ತು ಗುರುಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶರಣ ರಾಮಣ್ಣ ಅವರ 11ನೇ ಲಿಂಗೈಕ್ಯ ಸ್ಮರಣಾ ಪ್ರಯುಕ್ತ ಗುರುಮಕ್ಕಳ ಸಮಾವೇಶದಲ್ಲಿ ಮಾತನಾಡಿದರು.

ಮನುಷ್ಯ ಹಣ, ಅಧಿಕಾರದ ಗುಲಾಮನಾಗಿ ಕೆಲಸ ಮಾಡುತ್ತಿದ್ದಾನೆ. ಇದರಿಂದ ತಮ್ಮತನ ಕಳೆದುಕೊಂಡು ಸ್ವಾರ್ಥನಾಗಿರುವುದು ವಿಷಾದನೀಯ. ದೇಶದಲ್ಲಿ ಸ್ವತಂತ್ರಕ್ಕಾಗಿ ಅನೇಕ ಮಹನೀಯರು ಹೋರಾಟಗಳನ್ನು ಮಾಡಿದ್ದಾರೆ. ಅದೇ ರೀತಿ ಬಸವಣ್ಣ ಅವರು ದೇಶದ ಮಹಾಪುರುಷ, ದಾರ್ಶನಿಕ ರಾಜಕಾರಣಿ, ಎಲ್ಲದಕ್ಕಿಂತ ಮಿಗಿಲಾಗಿ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ವಚನಕಾರರಾಗಿದ್ದಾರೆ. ಕಲುಷಿತಗೊಳ್ಳುತ್ತಿರುವ ಸಮಾಜದಲ್ಲಿ ಮನುಕುಲದ ಒಳಿತಿಗಾಗಿ ಬಸವಣ್ಣ ಅವರಂಥ ಮಹಾನ್ ದಾರ್ಶನಿಕರ ತತ್ವ ಆದರ್ಶಗಳು ಪ್ರಸ್ತುತವಾಗಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ಸ್ವಾರ್ಥಕ್ಕಾಗಿ ಮಾನವೀಯ ಮೌಲ್ಯಗಳನ್ನು ಮರೆತು ಕ್ರೂರನಾಗುತ್ತಿದ್ದಾನೆ. ಧರ್ಮ-ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿರುವ ಇಂತಹ ಸಂದರ್ಭದಲ್ಲಿ ಧರ್ಮದ ಪ್ರಚಾರವನ್ನು ಸಮಾಜಕ್ಕೆ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಗುರುಬಸವೇಶ್ವರ ಪ್ರಾರ್ಥನಾ ಮಂದಿರವನ್ನು ದಾಳಿಂಬ ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಎಲ್ಲ ಮನೆ-ಮನಗಳಿಗೆ ಬಸವಣ್ಣನವರ ಆಚಾರ-ವಿಚಾರ, ಕಾಯಕದ ಶ್ರೇಷ್ಠತೆ ತಿಳಿಸಬೇಕು ಎಂದರು.

ತಾಲೂಕು ಬಸವ ಸಮಿತಿ ಅಧ್ಯಕ್ಷ ನಿರಂಜನಮೂರ್ತಿ ಹಾಗೂ ಸಾತನೂರು ರಂಗ ಕಲಾವಿದ ಮಹದೇವಸ್ವಾಮಿ ವಚನಗಳನ್ನು ಪಠಿಸಿದರು. ಮೈಸೂರಿನ ಶಿವಜನ್ಯ ತಂಡದಿಂದ ಬಸವ ಗೀತೆಗಾಯನ ಹಾಗೂ ವಚನಗಾಯನ ಕಾರ್ಯಕ್ರಮ ನಡೆಯಿತು. ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ, ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ, ಗುರುಮಲ್ಲೇಶ್ವರ ಮಠದ ನಿಜಗುಣ ಸ್ವಾಮೀಜಿ, ಚಳ್ಳಿಕೆರೆ ಅಡಪದ ಅಪ್ಪಣ್ಣ ಪೀಠದ ಗುರುಸ್ವಾಮೀಜಿ, ಮಂಡ್ಯ ಕಾಯಕ ಫೌಂಡೇಷನ್ ಶಿವಕುಮಾರ್, ಎಚ್.ಕೆ.ಮಹಾನಂದ, ಲಿಂಗಾಯತ ಮಹಾಸಭಾ ಟ್ರಸ್ಟ್ ಮಂಡ್ಯ ಮಂಜುನಾಥ್, ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತಸ್ವಾಮಿ, ಸಾಹಿತಿ ಸಚ್ಚಿದಾನಂದ ಚಟ್ನಳ್ಳಿ, ಲಿಂಗೈಕ್ಯ ರಾಮಣ್ಣ ಅವರ ಕುಟುಂಬದ ಈರಯ್ಯ, ಜಯರಾಮು ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಶರಣರ ಅನೇಕ ವಿಚಾರಗಳು ಅಡಕವಾಗಿವೆ. ಬಸವಣ್ಣನವರು ಸಾರಿದ ಎರಡು ಪ್ರಮುಖ ವಿಷಯಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ. ಸಾಮಾಜಿಕ, ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಇಂದಿಗೂ ಮೌಢ್ಯ ಹಾಗೂ ಕಂದಾಚಾರಕ್ಕೆ ಮಾರು ಹೋಗಿದ್ದೇವೆ. ಮೌಢ್ಯ, ಕಂದಾಚಾರಕ್ಕೆ ತಿಲಾಂಜಲಿ ಹಾಡಿದವರು ಬಸವಣ್ಣನವರು ಎಂಬುದನ್ನು ಮರೆಯಬಾರದು. ವಿಷಯಗಳನ್ನೇ ಹೊತ್ತುಬಂದ ಡಾ.ಚನ್ನಬಸವಾನಂದ ಸ್ವಾಮೀಜಿ ಇಂತಹ ಪುಟ್ಟ ಗ್ರಾಮದಲ್ಲಿ ಬಸವ ಪ್ರಾರ್ಥನಾ ಮಂದಿರ ಲೋಕಾರ್ಪಣೆಗೊಳಿಸಿದ್ದಾರೆ. ಇದರ ಪ್ರಾಮುಖ್ಯತೆ ಅರ್ಥಮಾಡಿಕೊಂಡು ಸದ್ಬಳಕೆ ಮಾಡಿಕೊಳಬೇಕು.

ಮರಳವಾಡಿ ಬಸವ ಗುರುಕುಲದ ಶ್ರೀ ಮೃತ್ಯುಂಜಯ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net