ವ್ಹೀಲಿಂಗ್ ಮಾಡುವ ಹುಡುಗರಿಗೆ ಹಾಟ್ ಸ್ಪಾಟ್ ಆದ ಎಕ್ಸ್ ಪ್ರೆಸ್ ವೇ

IMG-20230720-WA0076
Published on
  • ವಿಡಿಯೋ ವೈರಲ್ ಬೈಕಿನ ಸವಾರ ಅಂದರ್
  • ಹೆದ್ದಾರಿಯಲ್ಲಿ ಹದ್ದಿನ ಕಣ್ಣಿಟ್ಟ ಪೊಲೀಸರು


ಚೇತನ್ ಚಕ್ಕೆರೆ ಬಿಡದಿ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಎಂದರೆ ಅಪಘಾತದ ಹೆದ್ದಾರಿ ಎಂಬ ಹಣೆಪಟ್ಟಿ ಹೊಂದಿದೆ. ಇದೀಗ ಈ ಹೆದ್ದಾರಿ ಬೈಕ್ ವ್ಹೀಲಿಂಗ್ ಮಾಡುವ ಹಾಟ್‌ಸ್ಪಾಟ್ ಆಗಿಯೂ ಪರಿಣಮಿಸಿದೆ.

ಹೌದು...ದಶಪಥದಲ್ಲಿ ಯುವಕರು ಸ್ಕೂಟರ್‌ಗಳಲ್ಲಿ ವ್ಹೀಲಿಂಗ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಹೀಲಿಂಗ್ ಮಾಡುವ ಗೀಳಿಗೆ ಬಿದ್ದಿರುವ ಯುವಕರು ಪ್ರಾಣವನ್ನೂ ಲೆಕ್ಕಿಸದೆ, ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೊಸ ಹೆದ್ದಾರಿಯಲ್ಲಿ ಇಂಥ ಪ್ರಕರಣಗಳು ಮರುಕಳಿಸುತ್ತಿದ್ದು, ಠಾಣೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ.

ವ್ಹೀಲಿಂಗ್‌ನಿಂದ ಅಕ್ಕಪಕ್ಕದಲ್ಲಿ ಸಂಚರಿಸುವ ವಾಹನ ಸವಾರರಿಗೂ ಕಿರಿಕಿರಿ ಜತೆಗೆ ಭಯ ಉಂಟಾಗುತ್ತದೆ. ವ್ಹೀಲಿಂಗ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒರ್ವ ಯುವಕ ಬೈಕ್ ವ್ಹೀಲಿಂಗ್ ಮಾಡುತ್ತಿರುವ ದೃಶ್ಯವನ್ನು ಅವನ ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ, ಕ್ರೇಜ್‌ಗಾಗಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುತ್ತಾರೆ. ಇಂತಹ ವಿಡಿಯೋಗಳು ದಿನ ಕಳೆದಂತೆ ಹೆಚ್ಚು ವೈರಲ್ ಆಗುತ್ತಿವೆ.


ಹೆಚ್ಚು ವೈರಲ್ ಆದ ವಿಡಿಯೋಗಳನ್ನು ಆಧರಿಸಿ ಪೊಲೀಸರು ಬೈಕ್ ನಂಬರ್ ಹಾಗೂ ಬೈಕ್ ಸವಾರನ ಚಹರೆ ಮೇಲೆ ಪತ್ತೆ ಮಾಡಿ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಜುಲೈ ತಿಂಗಳಲ್ಲೇ ನಾಲ್ಕು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಕುಂಬಳಗೂಡು ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಸವಾರರು ಎರಡು ಡಿಯೋ ಸ್ಕೂಟರ್‌ಗಳಲ್ಲಿ 5 ತಿಂಗಳ ಹಿಂದೆ ವ್ಹೀಲಿಂಗ್ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋ ಕೂಡ ವೈರಲ್ ಆಗಿತ್ತು. ಎಚ್ಚೆತ್ತ ಪೊಲೀಸರು ಜು.6ರಂದು ಇಬ್ಬರು ಯುವಕರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೋಹಳ್ಳಿ- ಬಿಡದಿ ಮುಖ್ಯ ರಸ್ತೆಯ ತಿಮ್ಮೇಗೌಡನದೊಡ್ಡಿ ಸಮೀಪದ ರವಿ ಎಂಬಾತ ವ್ಹೀಲಿಂಗ್ ಮಾಡಿದ ದೃಶ್ಯವನ್ನು ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಆಧರಿಸಿ ಪೊಲೀಸರು ಜು.11ರಂದು ರವಿ ಹಾಗೂ ಸ್ಕೂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕೇತಗಾನಹಳ್ಳಿಯ ಸಮೀಪದ ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ದರ್ಶನ್ ಎಂಬ ಯುವಕ ವ್ಹೀಲಿಂಗ್ ಮಾಡಿದ್ದ. ಈ ವಿಡಿಯೋವನ್ನೂ ಜಾಲತಾಣದಲ್ಲಿ ಒಂದು ತಿಂಗಳ ಹಿಂದೆ ಪೋಸ್ಟ್ ಮಾಡಿದ್ದು, ದರ್ಶನ್ ಹಾಗೂ ಸ್ಕೂಟರ್ ಮಾಲೀಕ ರಾಜಣ್ಣ ವಿರುದ್ಧ ಜು.19ರಂದು ಪ್ರಕರಣ ದಾಖಲು ಮಾಡಿದ್ದಾರೆ.

ಇತ್ತೀಚೆಗೆೆೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಯುವಕರು ವ್ಹೀಲಿಂಗ್ ಮಾಡುವುದನ್ನು ಗೀಳು ಮಾಡಿಕೊಂಡಿದ್ದಾರೆ. ಇದರಿಂದ ಅವರ ಪ್ರಾಣಕ್ಕೂ ಇತರ ವಾಹನ ಸವಾರರಿಗೂ ಕಿರಿಕಿರಿ ಉಂಟಾಗುತ್ತಿದೆ. ಜಾಲತಾಣದ ಪೋಸ್ಟ್ ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಸೋಷಿಯಲ್ ಮೀಡಿಯಾ ಮೇಲೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ಕಾರ್ತಿಕ್ ರೆಡ್ಡಿ, ಎಸ್‌ಪಿ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net