ಹುಟ್ಟುವ ಕೆಲವರಷ್ಟೇ ಇತಿಹಾಸ ಸೇರುತ್ತಾರೆ

01-08-rama-ambedkar
Published on

ಅಂಬೇಡ್ಕರ್ ಅವರ ಸಾಧನೆಗಳನ್ನು ಬಣ್ಣಿಸಿದ ಶಾಸಕ ಇಕ್ಬಾಲ್ ಹುಸೇನ್

ಬೆಂವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಜನ್ಮದಿನಾಚರಣೆ

 ರಾಮನಗರ
ವಿದ್ಯಾರ್ಥಿಗಳು ಎಂಎ, ಎಂಎಸ್ಸಿಯಂತಹ ಉನ್ನತ ವ್ಯಾಸಂಗ ಮಾಡುವುದು ಮಾತ್ರವಲ್ಲದೇ ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಪಾಸು ಮಾಡುವ ಗುರಿ ಹೊಂದಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಬೆಂಗಳೂರು ವಿಶ್ವ ವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಉದ್ಘಾಟಸಿ ಮಾತನಾಡಿದರು.
ಭೂಮಿಯ ಮೇಲೆ ಹುಟ್ಟಿವವರ ಪೈಕಿ ಕೆಲವರಷ್ಟೇ ಇತಿಹಾಸಕ್ಕೆ ಸೇರುತ್ತಾರೆ. ಅಂಬೇಡ್ಕರ್ ಅವರು ವೈವಿಧ್ಯ ಭಾರತಕ್ಕೆ ಸಮಾನತೆಯನ್ನು ನೀಡುವ ಉದ್ದೇಶದಿಂದ ನೀಡಿದ ಸಂವಿಧಾನದ ಮೂಲಕ ಶಾಶ್ವತವಾಗಿ ಇತಿಹಾಸದ ಪುಟಕ್ಕೆ ಸೇರಿದ್ದಾರೆ ಎಂದರು. ಹಾಗೂ ರಾಮನಗರ ಸ್ನಾತಕೋತ್ತರ ಕೇಂದ್ರವು ಪೂರ್ಣ ಪ್ರಮಾಣದಲ್ಲಿ ವಿಶ್ವವಿದ್ಯಾಲಯ ಆಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.ತಿಳಿಸಿದರು.

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಅವರು ಭೌದ್ಧ ಧರ್ಮದ ನಡೆಯನ್ನು ಸಮಗ್ರವಾಗಿ ಚಿಂತಿಸಿ ಸ್ವೀಕರಿಸಿದ ಪರಿಯನ್ನು ತಿಳಿಸಿದರು. ವಿದ್ಯಾರ್ಥಿಗಳು ಸಮಗ್ರತೆ ಮತ್ತು ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಬುದ್ಧ ದು:ಖಿತ ಸಮಾಜದ ಮಾರ್ಗದಾತನಾದರೆ ಅಂಬೇಡ್ಕರ ಅವರು ಬುದ್ಧಮಾರ್ಗ ಅನುಸರಿಸುವುದಲ್ಲದೇ ಸಂವಿಧಾನ ರಚಿಸುವ ಮೂಲಕ ಭಾರತೀಯ ಸಮಾಜಕ್ಕೆ ಸಮಾನತೆಯ ಮಾರ್ಗದರ್ಶಕರಾಗಿದ್ದಾರೆ. ದೇಹ, ಮಾತು ಮತ್ತು ಮನಸ್ಸು ತ್ರಿಕರಣ ಶುದ್ಧಿಯ ಮಾರ್ಗಗಳು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವದ್ಯಾಲಯದ ಕುಲಸಚಿವ ಶೇಖ್ ಲತೀಫ್ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನ ಸಮುದಾಯ ಉನ್ನತ ಶಿಕ್ಷಣ ಪಡೆಯಲು ಮತ್ತು ನನ್ನಂತಹವರು ಆಡಳಿತಾಧಿಕಾರಿಯ ಹುದ್ದೆ ಪಡೆಯಲು ಸಾಧ್ಯವಾಗಿರುವುದು ಸಂವಿಧಾನದಿಂದ ಎಂಬುದನ್ನು ಸ್ಮರಿಸಲೇಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಬಗ್ಗೆಯೂ ಗಮನಹರಿಸಬೇಕು ಎಂದರು.

ವಿಶ್ವದ್ಯಾಲಯದ ವಿಶೇಷ ಘಟಕಾಧಿಕಾರಿ ಡಾ. ಪಿ.ಸಿ.ನಾಗೇಶ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ರಾಮಕೃಷ್ಣಯ್ಯ, ರಾಮನಗರದ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕಾರಿಗೌಡ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಡಾ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮುತ್ತುರಾಜ್ ಸ್ವಾಗತಿಸಿದರು. ಡಾ.ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net