

ಗಂಗಾಧರ್ ಬೈರಾಪಟ್ಟಣ ರಾಮನಗರ
ನಿಮ್ಮ ಕಾರು ಹಾಗೂ ಇತರ ವಾಹನ ನಿಮ್ಮ ಮನೆ ಬಳಿಯೇ ಇದ್ದರೂ ಟೋಲ್ ಹಣ ಕಟ್ಟಾಗಬಹುದು. ಯಾವುದಕ್ಕೂ ನಿಮಗೆ ಬರುವ ಎಸ್ಎಂಎಸ್ಗಳನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುತ್ತಿರಿ.
ಹೌದು, ಒಮ್ಮೆ ಪ್ರಯಾಣ ಮಾಡಿದರೆ ನಾಲ್ಕು ಬಾರಿ ಟೋಲ್ ಹಣ ಕಡಿತ ಮಾಡುವ ಮೂಲಕ ಸುದ್ದಿಯಾಗಿರುವ ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ಪ್ಲಾಜಾ ಸಿಬ್ಬಂದಿ, ಈಗ ವಾಹನ ಸಂಚಾರ ಮಾಡದಿದ್ದರೂ ಅಂತಹ ವಾಹನಗಳಿಗೆ ಟೋಲ್ ಕಡಿತ ಮಾಡಿ ವಾಹನ ಮಾಲೀಕರಿಗೆ ಟೋಲ್ ಕಡಿತದ ಎಸ್ಎಂಎಸ್ ಕಳಿಸುವ ಮೂಲಕ ಅಚ್ಚರಿ ಮೂಡುವಂತೆ ಮಾಡಿದೆ.
ಏನಾಗಿದೆ?
ರಾಮನಗರದ ಚೆನ್ನಿಗರಾಜು ಎಂಬುವರು ಟೋಲ್ ಸಂಗ್ರಹ ಆರಂಭವಾದ ದಿನದಿಂದಲೂ ತಮ್ಮ ಕಾರಿನಲ್ಲಿ ಬೆಂಗಳೂರು ಅಥವಾ ಮೈಸೂರಿಗಾಗಲಿ ಹೋಗಿಲ್ಲ. ಆದರೂ ಅವರಿಗೆ ಶನಿವಾರ ಬೆಳಗ್ಗೆ ಒಂದು ಸಂದೇಶ ಬಂದಿದ್ದು, ಕಣಮಿಣಕಿ ಟೋಲ್ ಪ್ಲಾಜಾ ದಲ್ಲಿ ಮಾರ್ಚ್ 24ರ ರಾತ್ರಿ 10.18 ನಿಮಿಷಕ್ಕೆ ನಿಮ್ಮ ಕಾರಿನ ಸಂಖ್ಯೆ ಕೆಎ 42 ಎಂ 3005 ಸಂಚಾರಕ್ಕಾಗಿ 135 ರೂ.ಗಳನ್ನು ಕಡಿತ ಮಾಡಲಾಗಿದೆ ಎನ್ನುವ ಎಸ್ಎಂಎಸ್ ಬಂದಿದೆ. ಇದು ಚನ್ನಿಗರಾಜು ಅವರ ಅಚ್ಚರಿಗೆ ಕಾರಣವಾಗಿದೆ.
ಕೂಡಲೇ ಕಣಮಿಣಕಿ ಟೋಲ್ ಪ್ಲಾಜಾಗೆ ತೆರಳಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಅವರ ಕಾರು ಸಂಚರಿಸದಿರುವುದು ದೃಢಪಟ್ಟಿದೆ. ಇದರಲ್ಲಿ ನಮ್ಮ ತಪ್ಪಿಲ್ಲ. ಹಾಗೂ ಇದಕ್ಕೂ ನಮಗೂ ಸಂಬಂಧವೇ ಇಲ್ಲ. ಎಸ್ಎಂಎಸ್ ಕಳಿಸಿರುವ ಟೆಲಿಕಾಂ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಹೇಳಿ ಕಳಿಸಿದ್ದಾರೆ. ಈ ಮೊದಲು ತಾಂತ್ರಿಕ ದೋಷ ಎನ್ನುತ್ತಿದ್ದ ಸಿಬ್ಬಂದಿ ಈಗ ಟೆಲಿಕಾಂ ಕಂಪನಿಗಳ ಕಡೆ ಬೊಟ್ಟು ಮಾಡುತ್ತಿದ್ದಾರೆ. ನಾವು ಯಾವುದೇ ಹಣ ಕಡಿತ ಮಾಡಿಲ್ಲ, ನಿಮಗೆ ಎಸ್ಎಂಎಸ್ ಬಂದಿರುವ ಟೆಲಿಕಾಂ ಕಂಪನಿ ವಿಚಾರಿಸಿ ಎನ್ನುತ್ತಿದ್ದಾರೆ. ಈ ಬಗ್ಗೆ ಟೆಲಿಕಾಂ ಕಂಪನಿಯನ್ನು ಕೇಳಿದರೆ ಹಣ ಹೇಗೆ ಕಡಿತಗೊಂಡಿದೆ ಗೊತ್ತಿಲ್ಲ, ಪರಿಶೀಲಿಸುತ್ತೇವೆ. ಒಂದು ವೇಳೆ ನಮ್ಮಿಂದ ಹಣ ಕಡಿತವಾಗಿದ್ದರೆ ಹಿಂದಿರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ಟೋಲ್ ಪ್ಲಾಜಾದಲ್ಲಿ ವಾಹನ ಸಂಚಾರ ಮಾಡದಿದ್ದರೂ ಹಣ ಹೇಗೆ ಕಡಿತವಾಗುತ್ತಿದೆ, ಇದರಲ್ಲಿ ಖಾಸಗಿ ಟೆಲಿಕಾಂ ಕಂಪನಿಯವರ ಪಾತ್ರವೇನು ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಇದರೊಂದಿಗೆ ಟೋಲ್ ಸಂಗ್ರಹ ಹೆಸರಲ್ಲಿ ಸಾರ್ವಜನಿಕರಿಗೆ ಟೋಪಿ ಹಾಕುವ ಕೆಲಸ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡುವಂತೆ ಮಾಡಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ಅಗತ್ಯವಿದೆ.
ಮೂರ್ನಾಲ್ಕು ಬಾರಿ ಕಡಿತ
ಇನ್ನು ಮಂಡ್ಯ ಮೂಲದ ತ್ಯಾಗರಾಜ್ ಅವರ ಕಾರು ಒಮ್ಮೆ ಕಣಮಿಣಕಿ ಟೋಲ್ ಪ್ಲಾಜಾ ಪ್ರವೇಶ ಮಾಡಿತ್ತು. ಇದಕ್ಕಾಗಿ ಾಸ್ಟ್ಟ್ಯಾಗ್ನಲ್ಲಿ 135 ರೂ. ಕಡಿತ ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಕಾರು ಟೋಲ್ನಲ್ಲಿ ಸಂಚರಿಸದಿದ್ದರೂ ಹಣ ಕಡಿತವಾಗಿದೆ. ಒಂದಲ್ಲ 3&4 ಬಾರಿ 135 ರೂ. ಕಡಿತವಾಗಿದೆ. ಈ ಬಗ್ಗೆ ತ್ಯಾಗರಾಜು ಅವರು ಟೋಲ್ ಸಿಬ್ಬಂದಿ ಗಮನಕ್ಕೆ ಪರಿಶೀಲಿಸಿದಾಗ ವಾಹನ ಸಂಚರಿಸದಿದ್ದರೂ ಹಣ ಕಡಿತವಾಗಿರುವುದು ಕಂಡುಬಂದಿದೆ. ಟೋಲ್ ಪ್ಲಾಜಾದ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಮ್ಮಿಂದ ತಪ್ಪಾಗಿದೆ ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುತ್ತೇವೆ ಹಾಗೂ ಕಡಿತವಾಗಿರುವ ಹಣ ಹಿಂತಿರುಗಿಸುತ್ತೇವೆ ಎಂದು ಅಧಿಕಾರಿಗಳು ತ್ಯಾಗರಾಜ್ ಬಳಿ ಕ್ಷಮೆ ಕೇಳಿದ್ದಾರೆ.
ಸ್ಪಷ್ಟತೆ ಇಲ್ಲ
ಹೆಚ್ಚುವರಿ ಕಡಿತ ಹಾಗೂ ವಾಹನ ಸಂಚಾರ ಇಲ್ಲದಿದ್ದರೂ ಹಣ ಕಡಿತ ಆಗುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಇದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತೆ ಆಗುತ್ತಿದೆ. ಪ್ರತಿದಿನ ಬೆಂಗಳೂರು ಮತ್ತು ಮೈಸೂರು ನಡುವೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಟನೆಗಳಿಂದ ಟೋಲ್ ಸಂಗ್ರಹ ಕಂಪನಿಗೆ ಹೆಚ್ಚು ಲಾಭವಾಗುತ್ತಿದೆ. ಹೆಚ್ಚುವರಿ ಕಡಿತದ ಬಗ್ಗೆ ಪ್ರಶ್ನೆ ಮಾಡಿದರೆ ಕ್ಷಮೆ ಕೋರಿ ಹಣ ವಾಪಸ್ ಕೊಡಿಸುವ ಭರವಸೆ ನೀಡುವ ಸಿಬ್ಬಂದಿ, ಮತ್ತೊಮ್ಮೆ ನಮ್ಮದೇನೂ ತಪ್ಪಿಲ್ಲ, ಟೆಲಿಕಾಂ ಕಂಪನಿ ಕೇಳಿ ಎಂದು ಹೇಳುತ್ತಿರುವುದು ಏಕೆ ಎನ್ನುವ ಅನುಮಾನ ಮೂಡುತ್ತಿದೆ.
ನನ್ನ ಕಾರು ಬೆಂಗಳೂರು ಕಡೆಗೆ ಪ್ರಯಾಣ ಮಾಡಲೇ ಇಲ್ಲ. ಆದರೂ ಟೋಲ್ ಪಾಸ್ ಮಾಡಿದ್ದೀರಿ ಎಂದು 135 ರೂ. ಕಡಿತ ಮಾಡಿರುವ ಸಂದೇಶ ಬಂದಿದೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರೆ ಟೆಲಿಕಾಂ ಕಂಪನಿ ವಿಚಾರಿಸಿ ಎನ್ನುತ್ತಾರೆ. ಸಂಬಂಧಪಟ್ಟವರು ಕೂಡಲೇ ನನಗೆ ಆಗಿರುವ ಅನ್ಯಾಯ ಸರಿಪಡಿಸಿ, ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಬೇಕಿದೆ.
ಕೆ.ಎನ್.ಚನ್ನಿಗರಾಜು, ರಾಮನಗರ