ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೈಲು ಹಳಿಗಳ ಬಳಿ ಮೇಲ್ಸೇತುವೆ

17-08-rama-service Road end at Channapatna1
Published on

 ಹೆದ್ದಾರಿ ಪ್ರಾಧಿಕಾರದಿಂದ ಕ್ರಮ  ಸರ್ವೀಸ್ ರಸ್ತೆ ಸಂಪರ್ಕಕ್ಕೆ ಆಗಿರುವ ಅಡ್ಡಿಗೆ ಮುಕ್ತಿ

ರಾಮನಗರ

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಸರ್ವೀಸ್ ರಸ್ತೆಗಳ ಸಂಪೂರ್ಣ ಸಂಪರ್ಕಕ್ಕೆ ಅಡ್ಡಿಯಾಗಿರುವ ರೈಲು ಹಳಿಗಳ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ಸೇರಿ ವಿವಿಧ ವಾಹನಗಳ ಸಂಚಾರ ನಿರ್ಬಂಧಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಇದೀಗ ಈ ವಾಹನಗಳ ಓಡಾಟಕ್ಕೆ ಸರ್ವೀಸ್ ರಸ್ತೆಯನ್ನು ಸುರಕ್ಷಿತಗೊಳಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.

ಸರ್ವೀಸ್ ರಸ್ತೆಗಳನ್ನು ಸರಿಯಾಗಿ ನಿರ್ಮಾಣ ಮಾಡದಿದ್ದರೂ ಹೆದ್ದಾರಿಯಲ್ಲಿ ಕೆಲವು ವಾಹನಗಳಿಗೆ ನಿರ್ಬಂಧ ವಿಧಿಸಿರುವ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ವಾಹನ ಸವಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಆ.1ರಿಂದಲೇ ಕೆಲ ವಾಹನಗಳ ಹೆದ್ದಾರಿ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಸರ್ವೀಸ್ ರಸ್ತೆಯಲ್ಲಿ ಸಾಗಿ ಬರುವ ನಿಷೇಧಿತ ವಾಹನ ಸವಾರರಿಗೆ ರೈಲು ಹಳಿಗಳ ಬಳಿ ರಸ್ತೆ ಅಂತ್ಯಗೊಂಡು ಗೊಂದಲ ಉಂಟಾಗಿ ದಾರಿ ತಪ್ಪುತ್ತಿದ್ದರು. ಇದನ್ನು ಗಮನಿಸಿರುವ ಹೆದ್ದಾರಿ ಪ್ರಾಧಿಕಾರ 118 ಕಿಮೀ ಉದ್ದದ ಹೆದ್ದಾರಿಯ ಸರ್ವೀಸ್ ರಸ್ತೆಯನ್ನು ಅಡೆತಡೆ ಇಲ್ಲದಂತೆ ಮಾಡಲು ಮುಂದಾಗಿದೆ.

ಎಲ್ಲೆಲ್ಲಿ ಬ್ರಿಡ್ಜ್ಗಳು

ಒಟ್ಟು ಮೂರು ಕಡೆ ರೈಲು ಹಳಿಗಳ ಮೇಲೆ ಹೆದ್ದಾರಿ ಹಾದು ಹೋಗುತ್ತದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಶೇಷಗಿರಿಹಳ್ಳಿ, ಚನ್ನಪಟ್ಟಣ ತಾಲೂಕಿನ ಮಳೂರು-ಬೈರಾಪಟ್ಟಣ ನಡುವೆ ಹಾಗೂ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಈ ಮೂರು ಕಡೆಗಳಲ್ಲಿ ಸರ್ವೀಸ್ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡಿರಲಿಲ್ಲ. ಇದರಿಂದಾಗಿ ಹೆದ್ದಾರಿ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿಯೇ ಬಂದರೂ ರೈಲು ಹಳಿಗಳ ಬಳಿ ಮೇಲ್ಸೇತುವೆ ಇಲ್ಲದೆ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿತ್ತು. ಇಲ್ಲವೇ ಪ್ರಮುಖ ನಗರಗಳ ಮೂಲಕವೇ ಸಂಚರಿಸಿ ಸರ್ವೀಸ್ ರಸ್ತೆಗೆ ಕೂಡಿಕೊಳ್ಳಬೇಕಿತ್ತು. ಇದೀಗ ಅತಿ ಶೀಘ್ರದಲ್ಲಿಯೇ ಈ ಮೂರು ಕಡೆಗಳಲ್ಲಿಯೂ ಸರ್ವೀಸ್ ರಸ್ತೆಗೂ ಮೇಲ್ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಹಳೇ ಹೆದ್ದಾರಿ ಅಭಿವೃದ್ಧಿಗೂ ಕ್ರಮ

ಇನ್ನು ಸರ್ವೀಸ್ ರಸ್ತೆ ಪ್ರಯಾಣಿಕರ ಸುರಕ್ಷತೆಗಾಗಿ ಬೈಪಾಸ್‌ಗೆ ಒಳಪಡುವ ಹಳೇ ಹೆದ್ದಾರಿಯನ್ನೂ ಅಭಿವೃದ್ಧಿ ಪಡಿಸುವುದಾಗಿ ಎನ್‌ಎಚ್‌ಎಐ ಹೇಳಿದೆ. ಇದರಿಂದಾಗಿ ರಾಮನಗರ-ಚನ್ನಪಟ್ಟಣ ಹಾಗೂ ಬಿಡದಿ ಬಳಿಯ ಗುಂಡಿ ಬಿದ್ದ ರಸ್ತೆಗೂ ಮುಕ್ತಿ ದೊರೆಯುವ ಆಶಾಭಾವನೆ ಮೂಡಿದೆ.

ಲೇನ್ ಶಿಸ್ತು ಪಾಲಿಸಿ

ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ಲೇನ್ ಶಿಸ್ತು ಪಾಲನೆ ಮಾಡದೆ ಇರುವುದೇ ಶೇ.25 ಅಪಘಾತಗಳು ಸಂಭವಿಸಲು ಕಾರಣ ಎಂದು ಪ್ರಾಧಿಕಾರ ಹೇಳಿದೆ. ಕಳೆದ 6 ತಿಂಗಳಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಕಡಿಮೆ ವೇಗದ ವಾಹನಗಳು ಬಲಭಾಗದಲ್ಲಿ ಚಲಿಸುವ ಕಾರಣ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್  ಸವಾರರಿಂದಾಗಿ ಶೇ.30 ಅಪಘಾತ ಸಂಭವಿಸಿದ್ದರೆ, ಅತಿವೇಗದಿಂದಾಗಿ ಶೇ.65-70ರಷ್ಟು ಅಪಘಾತಗಳಿಗೆ ಅತಿವೇಗವೇ ಕಾರಣ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ನಿಗದಿಪಡಿಸಿರುವ ವೇಗ ಮಿತಿ ಮೀರದಂತೆ ಹಾಗೂ ಲೇನ್ ಶಿಸ್ತು ಪಾಲಿಸುವಂತೆ ವಾಹನ ಸವಾರರಲ್ಲಿ ಪ್ರಾಧಿಕಾರ ಮನವಿ ಮಾಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net