

ರಾಮನಗರ: ನಗರ ಹೊರವಲಯದ ಬಸವನಪುರ ಬಳಿ ಶುಕ್ರವಾರ, ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ನೀರಿನ ಟ್ಯಾಂಕಿನ ಲಾರಿಯೊಂದು ಅದೇ ದಾರಿಯಲ್ಲಿ ಹಿಂದಕ್ಕೆ ತಿರುವು ತೆಗೆದುಕೊಂಡು ಹೆದ್ದಾರಿ ಸವಾರರಲ್ಲಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಲಾರಿಯು, ರಸ್ತೆ ಬದಿಯ ಗಿಡಗಳಿಗೆ ನೀರು ಹಾಯಿಸುತ್ತಿತ್ತು. ಗಿಡಗಳ ಸಾಲು ಮುಗಿದ ಬಳಿಕ ಮುಂದೆ ಸಿಗುವ ಯೂ ಟರ್ನ್‌ನಲ್ಲಿ ತಿರುವು ತೆಗೆದುಕೊಳ್ಳುವ ಬದಲು, ಚಾಲಕ ರಸ್ತೆಯಲ್ಲಿ ತಿರುವು ತೆಗೆದುಕೊಂಡಿದ್ದಾನೆ.
ಇದೇ ವೇಳೆ ವೇಗವಾಗಿ ಬಂದ ಕಾರೊಂದು ಬ್ರೇಕ್ ಹಾಕಿ ಲಾರಿಗೆ ಅತ್ಯಂತ ಸಮೀಪದಲ್ಲಿ ಬಂದು ನಿಂತಿದೆ. ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದೆ. ಈ ವೇಳೆ ಲಾರಿ ಚಾಲಕ ಹಾಗೂ ಕಾರು ಚಾಲಕರ ಮಧ್ಯೆ ವಾಗ್ವಾದ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ಕುರಿತು ಪೊಲೀಸ್ ಪ್ರಕರಣ ದಾಖಲಾಗಿಲ್ಲ.