

ರಾಮನಗರ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂವರು ತಜ್ಞರ ತಂಡ ವಿವಿಧ ಸ್ಥಳಗಳಿಗೆ ಬುಧವಾರ ಭೇಟಿ ಪರಿಶೀಲನೆ ನಡೆಸಿತು.
ರಸ್ತೆ ಸುರಕ್ಷತೆ ಸಲಹೆಗಾರ ಸುದರ್ಶನ್ ಕೆ. ಪೊಪ್ಲಿ, ಪ್ರಾಧಿಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್ (ಆರ್‌ಎಸ್‌ಒ) ಹಾಗೂ ಸೊಹ್ನಾ-ದೌಸಾ ಎಕ್ಸ್‌ಪ್ರೆಸ್ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್ ಸಿಂಗ್ ಅವರನ್ನೊಳಗೊಂಡ ಸಮಿತಿ, ಹೆದ್ದಾರಿ ಸುರಕ್ಷತೆ ಮತ್ತು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿತು.
ಹೆದ್ದಾರಿಯ ಕೆಂಗೇರಿ ಬಳಿಯ ಪಂಚಮುಖಿ ಆಂಜನೇಯ ದೇವಾಲಯದಿಂದ ಆರಂಭಗೊಂಡು, ಕಣಿಮಿಣಿಕೆ, ಹೆಜ್ಜಾಲ, ಹನುಮಂತನಗರ, ವಂಡರ್ ಲಾ ಗೇಟ್, ಕೇತಗಾನಹಳ್ಳಿ ಮೇಲ್ಸೇತುವೆ, ದಾಸಪ್ಪನದೊಡ್ಡಿ, ಕೆಂಪನಹಳ್ಳಿ ಗೇಟ್, ಮಾಯಗಾನಹಳ್ಳಿ, ಸಂಗಬಸವನದೊಡ್ಡಿ ಸೇರಿದಂತೆ ಹೆದ್ದಾರಿಯ ಅಲ್ಲಲ್ಲಿ ಬೇಟಿ ನೀಡಿ ಪರಿಶೀಲನೆ ನಡೆಸಿತು. ಅಪಘಾತ ಹೆಚ್ಚಾಗಿರುವ ಸ್ಥಳಗಳು ಹಾಗೂ ವಾಹನಗಳ ಪ್ರವೇಶ ಮತ್ತು ನಿರ್ಗಮನ ರಸ್ತೆಗಳನ್ನು ಪರಿಶೀಲಿಸಿತು.
ಮೇಲ್ಸೇತುವೆ ಮತ್ತು ಕೆಳಸೇತುವೆಗಳಿಗೂ ಭೇಟಿ ನೀಡಿದ ಸಮಿತಿ ಸದಸ್ಯರು, ಕೆಲವೆಡೆ ಸಾರ್ವಜನಿಕರು ಹಾಗೂ ವಾಹನ ಸವಾರರೊಂದಿಗೂ ಸಂವಾದ ನಡೆಸಿ ಮಾಹಿತಿ ಕಲೆ ಹಾಕಿದರು. ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳು ಸಮಿತಿಗೆ ಸಾಥ್ ನೀಡಿದರು.
ಹೆದ್ದಾರಿ ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ಬಳಿಕ 550ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 158ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಸ್ತೆ ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲ ಎನ್ನುವ ದೂರುಗಳು ಹಾಗೂ ಆಕ್ರೋಶ ಸಹ ವ್ಯಕ್ತವಾಗಿತ್ತು. ಜನಪ್ರತಿನಿಧಿಗಳು ಸಹ ರಸ್ತೆ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಸ್ತೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎನ್ನುವ ಆರೋಪವನ್ನು ಸಹ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಸಹ ಇತ್ತೀಚಿಗೆ ದಶಪಥವನ್ನು ಪರಿಶೀಲನೆ ಮಾಡಿ, ಕೆಲವು ಸೂಚನೆಗಳನ್ನು ನೀಡಿ ಜಾರಿಗೆ ತರುವಂತೆ ಹೇಳಿದ್ದರು. ಅಷ್ಟೇ ಅಲ್ಲದೆ, ಹೆದ್ದಾರಿಯನ್ನು ಪರಿಶೀಲನೆ ನಡೆಸಿದ್ದ ಜಿಲ್ಲಾ ಪೊಲೀಸರು, ಅಪಘಾತ ಸ್ಥಳಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಧಿಕಾರಕ್ಕೆ ವರದಿ ಕೊಟ್ಟಿದ್ದರು. ಅಧಿವೇಶನದಲ್ಲೂ ಅಪಘಾತ ಹೆಚ್ಚಳದ ವಿಷಯ ಪ್ರತಿಧ್ವನಿಸಿತ್ತು.
ಅದರ ಬೆನ್ನಲ್ಲೇ, ಪ್ರಾಧಿಕಾರವು ದಶಪಥದ ಸುರಕ್ಷತೆ ಮತ್ತು ಸುಧಾರಣಾ ಕ್ರಮಗಳ ಪರಿಶೀಲನೆಗಾಗಿ ಜುಲೈ 14ರಂದು ಸಮಿತಿ ರಚಿಸಿತ್ತು. ಹತ್ತು ದಿನದೊಳಗೆ ವರದಿ ನೀಡುವಂತೆಯೂ ಸೂಚನೆ ನೀಡಿತ್ತು.