

ಶೀಘ್ರದಲ್ಲೆ ದಶಪಥ ಪ್ರಯಾಣಿಕರ ರಕ್ಷಣೆಗೆ ಮತ್ತಷ್ಟು ಬಲ ಪ್ರಾಯೋಗಿಕವಾಗಿ ಎಐ ಕ್ಯಾಮರಾ ಅಳವಡಿಕೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಅಪಘಾತಗಳ ಮೂಲಕವೇ ಸುದ್ದಿಯಾಗುತ್ತಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಇನ್ನು ಮುಂದೆ ರಸ್ತೆ ಸುರಕ್ಷತಾ ತಂಡದ ಕಾವಲು ಇರಲಿದೆ.
ಹೌದು... ಅಪಘಾತಗಳ ಹೆಚ್ಚಳದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸತತ ಪರಿಶೀಲನೆ ನಡೆಸಿ ಹಲವಾರು ಸೂಚನೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಸುರಕ್ಷತೆ ಸಂಬಂಧ ಒಂದು ತಂಡವನ್ನು ನೇಮಕ ಮಾಡಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಎಕ್ಸ್ಪ್ರೆಸ್ ಹೆದ್ದಾರಿಯ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಈ ತಂಡದ ಮೇಲಿರಲಿದ್ದು, ಈ ತಂಡ ಆಗಾಗ ಹೆದ್ದಾರಿಯಲ್ಲಿ ಪರಿಶೀಲನೆ ನಡೆಸುವ ಮೂಲಕ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕಾರ್ಯನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ನುರಿತ ತಂಡವನ್ನು ನೇಮಕ ಮಾಡಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಟೆಂಡರ್ ಸಹ ಕರೆದಿದೆ. ಅತಿ ಶ್ರೀದಲ್ಲಿಯೇ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಬಲ ತುಂಬಲಿದೆ.
ಎಐ ಪ್ರಾಯೋಗಿಕ ಕಣ್ಣು
ಈಗಾಗಲೇ ಎಲ್ಲೆಡೆ ಚರ್ಚೆಗೆ ಕಾರಣವಾಗಿರುವ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಪ್ರಯಾಣಿಕ ವಾಹನಗಳ ಮೇಲೆ ನಿಗಾ ಇಡಲು ಹೆದ್ದಾರಿಯಲ್ಲಿ ಪ್ರಾಯೋಗಿಕವಾಗಿ ಎಐ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಮೂಲಕ ಹೆದ್ದಾರಿಯಲ್ಲಿ ಏನೆಲ್ಲಾ ಆಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಲು ಹಾಗೂ ತಂತ್ರಾಂಶವನ್ನು ಸುಧಾರಿಸಲು ಪ್ರಾಯೋಗಿಕವಾಗಿ ಬಿಡದಿ ಸಮೀಪ ಇದನ್ನು ಅಳವಡಿಸಲಾಗಿದೆ. ಇದು ಸದ್ಯಕ್ಕೆ ಚಲಿಸುವ ವಾಹನ ಎಷ್ಟು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ ಎನ್ನುವ ಮಾಹಿತಿ ಬಿತ್ತರಿಸುತ್ತಿದ್ದು, ಭವಿಷ್ಯದಲ್ಲಿ ಈ ಕ್ಯಾಮರಾಗಳು ಸಂಪೂರ್ಣವಾಗಿ ಇಡೀ ವಾಹನದ ಜಾತಕ ತೆಗೆಯುವುದರಲ್ಲಿ ಅನುಮಾನ ಇಲ್ಲ.
ಯಶಸ್ವಿ ಆದರೆ ಎಲ್ಲೆಡೆ?
ಪ್ರಸ್ತುತ ಬಿಡದಿ ಬಳಿ ಅಳವಡಿಸಿರುವ ಎಐ ಕ್ಯಾಮರಾವನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದ್ದು, ಇದರ ಆಗು-ಹೋಗುಗಳ ಅಧ್ಯಯನದ ನಂತರ ತಂತ್ರಾಂಶವನ್ನು ಸುಧಾರಿಸಿ ಇತರ ಕಡೆಗಳಲ್ಲಿಯೂ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಮೊದಲು ಪ್ರತಿ 200 ಮೀಟರ್ಗೆ ಒಂದರಂತೆ ಎಐ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ, ಪ್ರಾಯೋಗಿಕ ಯಶಸ್ಸಿನ ನಂತರವಷ್ಟೇ ರ್ನಿದಿಷ್ಟ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು.
ಸ್ಕೈವಾಕ್ ನಿರ್ಮಾಣಕ್ಕೂ ಕ್ರಮ
ಹೆದ್ದಾರಿ ಸಾಗುವ ರ್ನಿದಿಷ್ಟ ಸ್ಥಳಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲು ಪೊಲೀಸ್ ಅಧಿಕಾರಿಗಳು ಮತ್ತು ತಜ್ಞರ ತಂಡ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಸ್ಕೈವಾಕ್ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಲವಾರು ಕಡೆಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಶಾಶ್ವತ ಹಾಗೂ ಸಾರ್ವಜನಿಕ ಸ್ನೇಹಿಯಾದ ಸ್ಕೈವಾಕ್ ನಿರ್ಮಾಣಕ್ಕೆ ಪ್ರಸ್ತಾವನೆಯನ್ನೂ ಪ್ರಾಧಿಕಾರ ಸಲ್ಲಿಸಲಿದೆ.
ರಸ್ತೆ ಸುರಕ್ಷೆಗಾಗಿ ತಜ್ಞರ ತಂಡವೊಂದನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದು ಆಗಾಗ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ. ಇದರ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಎಐ ಕ್ಯಾಮರಾದ ಪ್ರಾಯೋಗಿಕ ಬಳಕೆ ನಡೆಯುತ್ತಿದ್ದು, ಇದು ಯಶಸ್ವಿ ಆದರೆ ರ್ನಿದಿಷ್ಟ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ರಾಹುಲ್ ಗುಪ್ತಾ, ಯೋಜನಾ ನಿರ್ದೇಶಕರು, ದಶಪಥ ಹೆದ್ದಾರಿ
ಅಧಿಕಾರಿಗಳ ತಂಡದಿಂದಲೂ ಸರ್ಕಾರಕ್ಕೆ ವರದಿ
ರಾಮನಗರ ಜಿಲ್ಲಾಡಳಿತ ಸಹ ಬೆಂಗಳೂರು - ಮೈಸೂರು ಹೆದ್ದಾರಿ ಸುರಕ್ಷತೆ ಸಂಬಂಧ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ. ಕಂದಾಯ, ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಹೆದ್ದಾರಿ ಪರಿಶೀಲನೆ ನಡೆಸಿ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವರದಿ ಸಿದ್ಧಪಡಿಸಿ ನೀಡಿದೆ ಎಂದು ಮೂಲಗಳು ತಿಳಿಸಿವೆ.