27ರಂದು ರಾಮನಗರ ಮಂಡಿಪೇಟೆ ಬನ್ನಿ ಮಹಾಂಕಾಳಿ ಕರಗ

Rmgm-Ph-002-Banni mahankali AmmaDevaru Alamkara-Photo-25-6-2023
????????????????????????????????????
Published on

 ರಾಮನಗರ

ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಮಂಡಿಪೇಟೆಯ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಜೂ.27 ರಂದು ವಿಜೃಂಭಣೆಯಿಂದ ನಡೆಯಲಿದೆ.

ಚಾಮುಂಡೇಶ್ವರಿ ಮತ್ತು ಬನ್ನಿ ಮಹಾಂಕಾಳಿ ದೇವಿಗೆ ಅಪಾರ ಭಕ್ತವೃಂದವಿದೆ. ಪ್ರತೀ ವರ್ಷ ಆಷಾಢ ಮಾಸದಲ್ಲಿ ಮೊದಲು ಬನ್ನಿಮಹಾಂಕಾಳಿ ನಂತರ ಚಾಮುಂಡೇಶ್ವರಿ ಕರಗ ವಿಜೃಂಭಣೆಯಿಂದ ನಡೆಯುತ್ತದೆ.

ಬನ್ನಿಮಹಾಂಕಾಳಿ ಅಮ್ಮನವರನ್ನು ಅಂದಾಜು 400 ವರ್ಷಗಳಿಗೂ ಮಿಗಿಲಾಗಿ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ. ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ರಾಯರು ಕೊಲ್ಲಾಪುರಕ್ಕೆ ಹೋಗಿದ್ದಾಗ ರಾತ್ರಿ ವೇಳೆ ಕನಸಿನಲ್ಲಿ ಬಂದ ದೇವಿಯು ತನಗೊಂದು ನೆಲೆ ಕಾಣಿಸುವಂತೆ ಕೇಳುತ್ತಾಳೆ. ಆಗ ಬಾಲಾಜಿ ರಾಯರು ಎಲ್ಲಿ ಎಂದು ಕೇಳಿದಾಗ. ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ದೇವಾಲಯ ಕಟ್ಟಿಸು ಎಂದು ದೇವಿ ತಿಳಿಸುತ್ತಾಳೆ. ಅದರಂತೆ ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಅಂದಿನ ಕ್ಲೋಸ್‌ಪೇಟೆ ಬಳಿಯಿದ್ದ ಬನ್ನಿ ಮರದ ಕೆಳಗೆ ಗೆಜ್ಜೆ ಶಬ್ಧ ನಿಂತಿತು. ಅಲ್ಲಿಯೇ ದೇವಸ್ಥಾನ ನಿರ್ಮಿಸಲಾಯಿತು ಎಂದು ಹಿರಿಯರು ಹೇಳುತ್ತಾರೆ.

ಈ ಹಿನ್ನೆಲೆ ಬಂಡಿ ಹಿಂದೆ ಬಂದ ದೇವಿಯನ್ನು ‘ಬಂಡಿ ಮಹಾಂಕಾಳಿ’ ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಕರಗ ಧಾರಣೆ:

ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತ್ತಿದ್ದರಂತೆ. ಈಗ ಮಲ್ಲಿಗೆ ಅಲಂಕಾರದ ಕರಗ ಉತ್ಸವ ಮಾಡಲಾಗುತ್ತಿದೆ. ಆರ್.ಎ.ನರಸಿಂಹಮೂರ್ತಿ ಎಂಬುವರು ಅಂದಾಜು 48 ವರ್ಷ ಒಬ್ಬರೇ ಕರಗ ಆರಾಧರಕರಾಗಿದ್ದರು. ನಂತರ ಕಳೆದ 19 ವರ್ಷಗಳಿಂದ ಅವರ ಮಗ ಯೋಗೇಶ್ ಕರಗ ಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.

ಬುಧವಾರ ಅಗ್ನಿಕೊಂಡ ಪ್ರವೇಶ;

ಮಂಗಳವಾರ ಸಂಜೆ ಮಲ್ಲಿಗೆ ಮೊಗ್ಗಿನಿಂದ ಶೃಂಗಾರಗೊಂಡ ಕರಗ ಹೊತ್ತ ಯೋಗೇಶ್ ದೇವಾಲಯದ ಆವರಣದಿಂದ ಹೊರಟು ತಿಗಳರಬೀದಿ, ರಾಘವೇಂದ್ರ ಕಾಲನಿ, ಐಜೂರು, ಛತ್ರದಬೀದಿ, ಅಗ್ರಹಾರ, ಕಾಯಿಸೊಪ್ಪಿನಬೀದಿ, ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳಾರತಿ ಸ್ವೀಕರಿಸಿ ಗಾಂಧೀನಗರ, ಪೊಲೀಸ್ ಕ್ವಾಟ್ರಸ್, ಡಾ.ಬಿ.ಆರ್.ಅಂಬೇಡ್ಕರ್ ಕಾಲನಿ, ಶೆಟ್ಟಹಳ್ಳಿಬೀದಿ, ಎಂ.ಜಿ.ರಸ್ತೆ, ಹಳೇ ಬಿ.ಎಂ.ರಸ್ತೆ, ಟ್ರೂಫ್ಲೈನ್, ಅರ್ಕೇಶ್ವರ ಕಾಲನಿ, ನೇರಳೇಕೇರಿ, ಬಾಲಗೇರಿ ಮುಖಾಂತರ ಬುಧವಾರ ಬೆಳಗ್ಗೆ ದೇವಸ್ಥಾನದ ಬಳಿ ಬಂದು ಅಗ್ನಿಕೊಂಡ ಪ್ರವೇಶ ಮಾಡುತ್ತಾರೆ. ಕರಗ ಮೆರವಣಿಗೆಯಲ್ಲಿ ವೀರಮಕ್ಕಳು ಸೇರಿ ಸಾವಿರಾರು ಮಂದಿ ಭಾಗವಹಿಸುತ್ತಾರೆ.

ವಿವಿಧ ಕಾರ್ಯಕ್ರಮಗಳು :

ಜೂ.27ರಂದು ರಾತ್ರಿ ಕರಗ ಮೆರವಣಿಗೆ, 28ರಂದು ಕರಗ ಆರಾಧಕರಿಂದ ಅಗ್ನಿಕೊಂಡ ಪ್ರವೇಶ, 29ರಂದು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಸಿಡಿ ಉತ್ಸವ, 30ರಂದು ಮಧ್ಯಾಹ್ನ 12 ಗಂಟೆಗೆ ದೇವಾಲಯದ ಆವರಣದಲ್ಲಿ ಬೃಹತ್ ಅನ್ನಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net