

ರಾಮನಗರ: ಬಮೂಲ್‌ನ ನೂತನ ಅಧ್ಯಕ್ಷರಾಗಿ ಕನಕಪುರ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ನಿರ್ದೇಶಕ ರಾಜ್‌ಕುಮಾರ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಬುಧವಾರ ಬೆಂಗಳೂರಿನ ಬಮೂಲ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ರಾಜ್‌ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಇದರೊಂದಿಗೆ ಬಾಕಿ ಇರುವ 9 ತಿಂಗಳ ಅವಧಿಗೆ ಕನಕಪುರದ ರಾಜ್‌ಕುಮಾರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸುರೇಶ್ ಆಯ್ಕೆ: ಮಾಗಡಿಯ ನರಸಿಂಹಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜಕುಮಾರ್ ಮತ್ತು ಬೆಂಗಳೂರು ಉತ್ತರದ ಕೇವಶ ಮೂರ್ತಿ ಪ್ರಬಲ ಪೈಪೋಟಿ ನಡೆಸಿದ್ದರು. ಈ ಸಂಬಂಧ ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಾಮಲಿಂಗಾರೆಡ್ಡಿ, ಶಾಸಕ ಶರತ್ ಬಚ್ಚೇಗೌಡ, ಶಿವಣ್ಣ, ಶ್ರೀನೀವಾಸ್, ಬಾಲಕೃಷ್ಣ, ಎಂಎಲ್‌ಸಿ ಎಸ್.ರವಿ ಸೇರಿದಂತೆ ಇತರೆ ಪ್ರಮುಖ ಮುಖಂಡರು ಹಾಗೂ ಬಮೂಲ್ ನಿರ್ದೇಶಕರ ಜೊತೆಗೆ ಮಂಗಳವಾರ ಸಂಜೆ ಸಭೆಯನ್ನು ನಡೆಸಿದ್ದರು.
ಈ ವೇಳೆ ಕೇವಶ ಮೂರ್ತಿ ತಮಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಮೊದಲೇ ನಿರ್ಧಾರ ಮಾಡಿದಂತೆ ಸಂಸದ ಸುರೇಶ್ ರಾಜ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಬೇಕು ಎನ್ನುವ ನಿಟ್ಟಿನ ತಮ್ಮ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಸಂಸದರ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಶರತ್ ಮುಂದಾಳತ್ವ: ಮಂಗಳವಾರದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಬುಧವಾರ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮುಂದಾಳತ್ವದಲ್ಲಿಯೇ ರಾಜ್‌ಕುಮಾರ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ನ ಸದಸ್ಯರು ಇದ್ದರಾದರೂ ಯಾರೂ ನಾಮಪತ್ರ ಸಲ್ಲಿಕೆಗೆ ಮುಂದಾಗದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಖಚಿತವಾಯಿತು.
ನೂತನ ಅಧ್ಯಕ್ಷರಿಗೆ ಸವಾಲು:
ನೂತನ ಅಧ್ಯಕ್ಷರಿಗೆ ಈಗ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಹೆಚ್ಚಿಸುವ ದೊಡ್ಡ ಸವಾಲು ಎದುರಾಗಲಿದೆ. ಹಾಲಿನ ಖರೀದಿ ಧರ ಹೆಚ್ಚಳ ಮಾಡಬೇಕಾದರೆ, ಮಾರಾಟ ದರವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಬಮೂಲ್‌ನಿಂದ ಇದೆಯಾದರೂ, ಇದಕ್ಕೆ ಸರ್ಕಾರ ಇನ್ನೂ ಸಹಮತ ವ್ಯಕ್ತಪಡಿಸಿಲ್ಲ. ಕಳೆದ ಎರಡು ದಿನಗಳ ಹಿಂದೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಸ್ಪಷ್ಟ ನಿರ್ಧಾರವಿಲ್ಲದೆ ಸಭೆ ಮುಂದೂಡಲಾಗಿದೆ. ಈಗಾಗಲೇ ಬಮೂಲ್ ಪ್ರತಿ ತಿಂಗಳು 15 ಕೋಟಿ ರೂ.ಗಳ ನಷ್ಟವನ್ನು ಅನುಭವಿಸುತ್ತಿದ್ದು, ಹೊಸ ಅಧ್ಯಕ್ಷರು ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿದೆ.