

ಕೆಲ ಜಾಗ ಒತ್ತುವರಿ, ಉಳಿದೆಡೆ ಗಿಡ-ಗಂಟಿ ಸಮಸ್ಯೆ ಬಗೆಹರಿಸಬೇಕಾದವರ ಮೌನ
ಚೇತನ್ ಚಕ್ಕೆರೆ ಬಿಡದಿ
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಅವಶ್ಯಕ ಎನ್ನುವ ಅಭಿಪ್ರಾಯ ಶಿಕ್ಷಣ ತರದ್ದು. ಆದರೆ, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಆಟವಾಡಲು ಮೈದಾನವೇ ಇಲ್ಲದೆ ಕ್ರೀಡಾ ಚಟುವಟಿಕೆಗಳಿಂದ ಮಕ್ಕಳು ದೂರ ಉಳಿಯುವ ದುಸ್ಥಿತಿ ಬಂದಿದೆ.
ಹೌದು... ಭದ್ರಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನವೇ ಇಲ್ಲ. ಶಾಲೆ ಕಟ್ಟಡದ ಎದುರಿನ ಅಲ್ಪ ಜಾಗದಲ್ಲೇ ಮಕ್ಕಳು ಆಟವಾಡಬೇಕಿದೆ. ನಿತ್ಯ ಆಟವಾಡಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕಿದ್ದ ವಿದ್ಯಾರ್ಥಿಗಳಿಗೆ ಮೈದಾನ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಪಾಠದ ಜತೆಗೆ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ವಿದ್ಯಾರ್ಥಿಗಳದ್ದಾಗಿದೆ. ಈ ಹಿಂದೆ ಇದ್ದ ಮೈದಾನದ ಜಾಗದಲ್ಲಿ ಮನೆ ನಿರ್ಮಾಣವಾಗಿದ್ದರೆ, ಉಳಿದ ಜಾಗದಲ್ಲಿ ಗಿಡ&ಗಂಟಿಗಳು ಬೆಳೆದಿವೆ. ಇದನ್ನು ತೆರವುಗೊಳಿಸದಿರುವುದರಿಂದ ಮಕ್ಕಳ ಆಟೋಟಗಳಿಗೆ ಸ್ಥಳವಿಲ್ಲದಂತಾಗಿದೆ. ಸಮಸ್ಯೆ ಬಗೆಹರಿಸುವಲ್ಲಿ ಶಿಕ್ಷಣ ಅಧಿಕಾರಿಗಳೂ ಮೌನ ವಹಿಸಿದ್ದಾರೆ.
ವಿದ್ಯಾರ್ಥಿಗಳಿಗಿಲ್ಲ ಮೈದಾನ
ಶಾಲೆಯಲ್ಲಿ 60 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಎಂದ ಮೇಲೆ ಆಟದ ಮೈದಾನ ಇರಬೇಕು. ಮಕ್ಕಳಿಗೆ ಕಲಿಕೆ ಮೇಲಿರುವಷ್ಟೇ ಆಸೆ ಕ್ರೀಡೆಗಳ ಮೇಲೂ ಇರುತ್ತದೆ. ಮೈದಾನವಿಲ್ಲದೆ ಮಕ್ಕಳು ಕ್ರೀಡೆಯ ಆಸೆಯನ್ನು ಒಳಗಿಟ್ಟುಕೊಂಡು ದಿನ ದೂಡುತ್ತಿದ್ದಾರೆ.
ಈ ಮೊದಲು ಶಾಲೆ ಹಿಂದೆ ಸುಸಜ್ಜಿತ ಆಟದ ಮೈದಾನ ಇತ್ತು. 2007ರವರೆಗೆ ಶಾಲೆ ಆಟದ ಮೈದಾನ ಇತ್ತು ಅಲ್ಲಿಂದ ಈಚೆಗೆ ಮೈದಾನ ಮಾಯವಾಗಿದೆ. ಮೈದಾನ ಇದ್ದ ಜಾಗದಲ್ಲಿ ಮನೆ ನಿರ್ಮಾಣವಾಗಿದೆ. ಇನ್ನುಳಿದ ಜಾಗದಲ್ಲಿ ಉಳ್ಳವರು ತಂತಿ ಬೇಲಿ ಹಾಕಿಕೊಂಡಿದ್ದಾರೆ.
ಖಾಸಗಿಯವರ ಪಾಲು
ಗ್ರಾಮದಲ್ಲಿ ಶಾಲೆ ಆರಂಭವಾದ ದಿನದಲ್ಲಿ ಮೈದಾನ ಇತ್ತು. ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದ ನಂತರ ಇದನ್ನೇ ಬಂಡವಾಳ ಮಾಡಿಕೊಂಡ ಪ್ರಭಾವಿಗಳು ಸ್ಥಳಿಯ ಗ್ರಾಪಂನ ಕೆಲ ಅಧಿಕಾರಿಗಳನ್ನು ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಮೈದಾನದ ಸುಮಾರು 180* 40 ಚದರ ಅಡಿ ಜಾಗ ಕಬಳಿಸಿದ್ದಾರೆ. ಇದನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು!
ಆಟದ ಜಾಗ ಖಾಸಗಿಯವರ ಪಾಲಾದ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಟದ ಮೈದಾನ ಇಲ್ಲ ಎಂದು 2023ರ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಆಗ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಆಟದ ಮೈದಾನ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿದಿದೆ.
ಗ್ರಾಮದ ಶಾಲೆಗೆ ಬರುವ ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲ. ಈ ಹಿಂದೆ ಇದ್ದ ಮೈದಾನದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಜತೆ ಹೋರಾಟ ಮಾಡಿದ್ದೇನೆ. ಆದರೆ, ಭರವಸೆ ಬಿಟ್ಟರೆ ನ್ಯಾಯ ಸಿಕ್ಕಿಲ್ಲ.
ಶಶಿ, ಭದ್ರಾಪುರ
ನಮ್ಮ ಮಕ್ಕಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಮೈದಾನದ ಜಾಗ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ೇತ್ರ ೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಇದೇ ವಿಚಾರಕ್ಕೆ ಮತದಾನ ಬಹಿಷ್ಕಾರ ಮಾಡಿದ್ದಾಗ ಅಧಿಕಾರಿಗಳು ಬಂದು ಒತ್ತುವರಿದಾರರಿಗೆ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು. ಅವರು ತಿಂಗಳ ನಂತರ ತೆರವುಗೊಳಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಬಿಟ್ಟುಕೊಟ್ಟಿಲ್ಲ.
ನಾಯಕ್ ರೆಡ್ಡಿ ಭದ್ರಾಪುರ