ಗಿಡ-ಗಂಟಿಯಿಂದ ಅರ್ಕಾವತಿ ಸೇತುವೆಗೆ ತೊಂದರೆ ತೆರವಿಗೆ ಸಾರ್ವಜನಿಕರ ಆಗ್ರಹ

Rmgm-Ph-01-Ramanagara Arkavathi Sethuve Gida Gende-Samsye Story News Photo Rmgm- 19-7-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಅರ್ಕಾವತಿ ಸೇತುವೆ ಇಕ್ಕೆಲಗಳಲ್ಲಿ ಗಿಡ -ಗಂಟಿ ಬೆಳೆದು ಆತಂಕ ಉಂಟಾಗಿದೆ. ತಕ್ಷಣ ಗಿಡಗಳನ್ನು ತೆರವು ಮಾಡಿ, ಸೇತುವೆಯನ್ನು ನಗರಸಭೆ ಸುಭದ್ರ ಸ್ಥಿತಿಯಲ್ಲಿ ಉಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ರಾಮನಗರ ಹಳೇ ಬಸ್​ ನಿಲ್ದಾಣ ಸಮೀಪ ನಗರ ಪ್ರದೇಶಕ್ಕೆ ಪ್ರವೇಶ ಕಲ್ಪಿಸುವ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಎರಡು ಭಾಗಗಳಲ್ಲೂ ಗಿಡ&ಗಂಟಿಗಳು ಬೆಳೆದು ನಿಂತಿವೆ. ಪ್ರಮುಖವಾಗಿ ಅರಳಿ ಗಿಡಗಳು ಬೆಳೆದಿವೆ. ಈಗಾಗಲೇ 6 ರಿಂದ 10 ಅಡಿಯಷ್ಟು ಬೆಳೆದಯ ಒಂದೇ ಗಿಡದಲ್ಲಿ ಅನೇಕ ಕವಲುಗಳಾಗಿವೆ.ಇದು ಪ್ರಮುಖ ವಾಣಿಜ್ಯ ಸಂಪರ್ಕ ಸೇತುವೆಯಾಗಿದ್ದು, ಹೋಟೆಲ್​, ಚಿನ್ನ, ಬಟ್ಟೆ, ಹಣ್ಣು, ದಿನಸಿ ಮುಂತಾದ ಅಂಗಡಿಗಳು, ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆ, ಸಣ್ಣ&ಪುಟ್ಟ ಕೈಗಾರಿಕಾ ವಸ್ತುಗಳು, ರೇಷ್ಮೆ ಪಿಲೇಚರ್​, ದೇವಾಲಯಗಳು, ಕಲ್ಯಾಣ ಮಂಟಪಗಳು ಈ ಪ್ರದೇಶದಲ್ಲಿವೆ. ರಾಮನಗರದ ಶೇ.70ರಷ್ಟು ಜನರು ಈ ಸೇತುವೆ ಬಳಸುತ್ತಾರೆ.

ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾದರೆ, ಈ ಸೇತುವೆಯೇ ಪ್ರಮುಖ ಸಂಪರ್ಕ.ಮುಂಚೆ ಇದೇ ಸೇತುವೆ ಬೆಂಗಳೂರು&ಮೈಸೂರು ಹಳೇ ರಸ್ತೆಯಾಗಿತ್ತು. ಹಲವು ವರ್ಷಗಳ ಹಿಂದೆ ಗುಣಮಟ್ಟದಿಂದ ನಿರ್ಮಿಸಲಾಗಿದೆ.

ನಂತರ ಕೆಲವು ವರ್ಷಗಳಲ್ಲಿ ಕಿರಿದಾದ ಸೇತುವೆ ಪಕ್ಕದಲ್ಲೇ ಮತ್ತೊಂದು ಸೇತುವೆ ನಿರ್ಮಾಣ ಮಾಡಿ, ಮತ್ತಷ್ಟು ವಿಸ್ತಾರ ಮಾಡಲಾಗಿದೆ. ಅರ್ಕಾವತಿ ನದಿ ಸೇತುವೆ ಮೇಲೆ ವ್ಯಾಪಾರಿಗಳು ತರಕಾರಿ ವ್ಯಾಪಾರ ನಡೆಸುತ್ತಾರೆ. ವ್ಯಾಪಾರ ಆಗದೆ ಅಳಿದುಳಿದ ತರಕಾರಿ ಜತೆಗೆ ಜನರು ನದಿಗೆ ಎಲ್ಲಿಂದಲೋ ತಂದು ಕಸ ಎಸೆದು ಹೋಗುತ್ತಿದ್ದರು.

ನಗರಸಭೆ ಕಳೆದ ವರ್ಷ ನದಿಗೆ ಕಸ ಹಾಕುವುದನ್ನು ತಡೆಯಲು ಸೇತುವೆ ಎರಡೂ ಬದಿಯಲ್ಲಿ ಜಾಲರಿ ನಿರ್ಮಾಣ ಮಾಡಿತ್ತು. ಈಗ ಸೇತುವೆ ಮಧ್ಯ ಭಾಗದಲ್ಲಿ ಅರಳಿ ಗಿಡಗಳು ಜಾಲರಿ ಎತ್ತರಕ್ಕೆ ಬೆಳೆಯುತ್ತಿವೆ. ಗಿಡಗಳ ಬೇರು ಹೆಚ್ಚಾದರೆ, ಸೇತುವೆಗೆ ಅಪಾಯ ಆಗುವ ಸಾಧ್ಯತೆಗಳಿದ್ದು, ಗಿಡಗಳು ಬೆಳೆದಂತೆಲ್ಲ ಕಾಂಡ ದಪ್ಪವಾಗಿ, ಬೇರು ಸೇತುವೆ ಸೀಳಿ ಸಿಮೆಂಟ್​ ಹಾಳು ಮಾಡುತ್ತವೆ. ಇದರಿಂದ ಸೇತುವೆ ಶಿಥಿಲಾವಸ್ಥೆ ತಲುಪುವ ಕಾರಣ, ನಗರದ ಬಹುಪಯೋಗಿಯಾಗಿರುವ ಬಹುಕಾಲದ ಸೇತುವೆ ತೊಂದರೆಗೊಳಗಾಗುತ್ತದೆ. ಪ್ರತಿನಿತ್ಯ ಇದೇ ಸೇತುವೆ ಮೇಲೆ ನೂರಾರು ವಾಹನಗಳು, ಸಾವಿರಾರು ಜನ ಓಡಾಟ ನಡೆಸುತ್ತಾರೆ. ಸಂಬಂಧಪಟ್ಟ ಇಲಾಖೆ ಸೇತುವೆ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಗಿಡ-ಗಂಟಿ ತೆರವುಗೊಳಿಸಿ, ಸೇತುವೆ ಶಿಥಿಲ ಆಗುವುದನ್ನು ತಪ್ಪಿಸಬೇಕಿದೆ.

ಈಗಾಗಲೇ ಎರಡು ಬಾರಿ ಗಿಡಗಳನ್ನು ತೆಗೆಸಲಾಗಿತ್ತು. ನದಿಯಲ್ಲಿ ಹೆಚ್ಚಿನ ನೀರು ಇರುವ ಕಾರಣ ತೆರವು ಮಾಡಲು ಆಗಿಲ್ಲ. ನೀರು ಕಡಿಮೆಯಾದ ನಂತರ ಗಿಡ&ಗಂಟಿ ತೆರವು ಮಾಡುವುದರ ಜತೆಗೆ ನಗರಸಭೆ ಸೇತುವೆ ದುರಸ್ತಿ ಮಾಡಲಿದೆ.

 ರಂಗರಾಜು, ಎಇಇ, ನಗರಸಭೆ, ರಾಮನಗರ

ಕಳೆದ ವರ್ಷ ನಗರಸಭೆ ಸೇತುವೆ ಮೇಲೆ ಬೆಳೆದ ಗಿಡ&ಗಂಟಿ ತೆರವು ಮಾಡಿತ್ತು. ಆದರೆ, ತೆರವು ಸಂದರ್ಭದಲ್ಲಿ ಗಿಡದ ಬೇರು ಸಮೇತ ತೆಗೆಯಬೇಕಿತ್ತು. ತೆಗೆಯದ ಕಾರಣ ಮತ್ತೆ ಯಥಾ ಪ್ರಕಾರ ಗಿಡ&ಗಂಟಿ ಸೇತುವೆಯ ಎರಡೂ ಬದಿಯಲ್ಲಿ ಬೆಳೆಯುತ್ತಿವೆ. ಸೇತುವೆ ರಾಮನಗರದ ಜನರ ಪ್ರಮುಖ ಸಂಪರ್ಕ ಕೊಂಡಿ. ಇಂತಹ ಪ್ರಮುಖ ಸೇತುವೆ ಶಿಥಿಲವಾಗುತ್ತದೆ. ಸಂಬಂಧಪಟ್ಟ ಇಲಾಖೆ ಗಿಡ&ಗಂಟಿ ತೆರವುಗೊಳಿಸಬೇಕು.

ರಾಜಣ್ಣ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net