ಅರ್ಕಾವತಿ ಒಡಲಿಗೆ ಕೋಳಿ ತ್ಯಾಜ್ಯ ರಾಮನಗರದ 11 ವಾರ್ಡ್​ಗಳಿಗೆ ನೀರು ಪೂರೈಕೆ ಸ್ಥಗಿತ

06-07-rama-water
Published on

ರಾಮನಗರ

ಅರ್ಕಾವತಿ ನದಿಗೆ ಕೋಳಿ ತ್ಯಾಜ್ಯ ಹರಿಬಿಟ್ಟ ಕಾರಣ ನೀರು ಕಲುಷಿತಗೊಂಡಿದ್ದು, ನಗರಸಭೆ 11 ವಾರ್ಡ್​ಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಅರ್ಕಾವತಿ ನದಿ ಪಾತ್ರದ ಗ್ರಾಮ ತಿಬ್ಬೇಗೌಡನದೊಡ್ಡಿ ಬಳಿ ಮುನೇಶ್ವರಸ್ವಾಮಿ ದೇವಾಲಯದ ಸಮೀಪವೇ ಇರುವ ಖಾಸಗಿ ಕೋಳಿ ಸಾಕಾಣಿಕೆ ಕೇಂದ್ರದವರು ನದಿಗೆ ರಾಸಾಯನಿಕ ಮಿಶ್ರಿತ ತ್ಯಾಜ್ಯ ಹರಿಬಿಟ್ಟಿರುವ ಕಾರಣ ನೀರು ಕಲುಷಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರು ಸರಬರಾಜು ನಿಲ್ಲಿಸಿದೆ.

ಕಲುಷಿತಗೊಳ್ಳುತ್ತಿದೆ ನದಿ

ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದಾಗಿರುವ ವೃಷಭಾವತಿ ಈಗಾಗಲೇ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದೇ ದಾರಿಯಲ್ಲಿ ಅರ್ಕಾವತಿಯೂ ಸಾಗುತ್ತಿದೆ. ನದಿ ಪಾತ್ರದ ಗ್ರಾಮಗಳಿಂದಲೂ ಹಲವಾರು ಕಡೆಗಳಲ್ಲಿ ತ್ಯಾಜ್ಯ ನೀರು ಸೇರಿ ಮಲಿನವಾಗುತ್ತಿದೆ. ಇದೀಗ ತಿಬ್ಬೇಗೌಡನದೊಡ್ಡಿ ಬಳಿಯೂ ಖಾಸಗಿ ಕೋಳಿ ಸಾಕಾಣಿಕೆ ಕೇಂದ್ರವಿದ್ದು, ಇಲ್ಲಿನ ತ್ಯಾಜ್ಯವನ್ನು ನದಿಗೆ ಹರಿಬಿಡಲಾಗಿದೆ. ಇದರಿಂದಾಗಿ ನಗರದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.

ಪರೀಕ್ಷೆಗೆ ನೀರು

ನಗರದ ದೇವರಸೇಗೌಡನದೊಡ್ಡಿ ಬಳಿ ನೀರು ಶುದ್ಧೀಕರಣ ಟಕವಿದ್ದು, ಅರ್ಕಾವತಿ ನದಿ ನೀರನ್ನು ಇಲ್ಲಿ ಶುದ್ಧೀಕರಣ ಮಾಡಿ 11 ವಾರ್ಡ್​ಗಳಿಗೆ ಪೂರೈಕೆ ಮಾಡಲಾಗುತ್ತದೆ. ಆದರೆ ನದಿಯಲ್ಲಿ ಕೋಳಿ ತ್ಯಾಜ್ಯ ಕಂಡು ಬಂದ ತಕ್ಷಣವೇ ಎಚ್ಚೆತ್ತ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ನೀರಿನ ಪೂರೈಕೆ ಸ್ಥಗಿತ ಮಾಡಿವೆ. ನಂತರ ನಗರಸಭೆ ಜನಪ್ರತಿನಿಧಿಗಳು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ತ್ಯಾಜ್ಯ ಮಿಶ್ರಣ ಸ್ಪಷ್ಟವಾಗಿದ್ದು, ತಕ್ಷಣವೇ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಪೊಲೀಸರಿಗೆ ದೂರು

ನೀರಿಗೆ ಕೋಳಿ ತ್ಯಾಜ್ಯ ಬಿಟ್ಟು ಕಲುಷಿತಗೊಳಿಸುವ ಮೂಲಕ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚನ್ನಪಟ್ಟಣ ಉಪ ವಿಭಾಗದ ಎಇಇ ರಾಮನಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ನದಿ ನೀರಿಗೆ ಕೋಳಿ ತ್ಯಾಜ್ಯ ಮತ್ತು ರಾಸಾಯನಿಕ ಸೇರ್ಪಡೆ ಆಗಿರುವ ಕಾರಣ ಕುಡಿಯಲು ಯೋಗ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ. ತಪ್ಪಿಸ್ಥತರ ವಿರುದ್ಧ ಕ್ರಮಕ್ಕೂ ದೂರು ನೀಡಲಾಗಿದೆ.

 ಸೋಮಶೇಖರ್​, ಉಪಾಧ್ಯಕ್ಷ ರಾಮನಗರ ನಗರಸಭೆ

ಜಾಗೃತಿ ಅಗತ್ಯ

ಅರ್ಕಾವತಿ ನದಿ ಕಲುಷಿತವಾಗುತ್ತಿರುವ ಬಗ್ಗೆ ಪರಿಸರ ಪ್ರೇಮಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೊರಬರುವ ನೀರು ಈಗಾಗಲೇ ಕಲುಷಿತಗೊಂಡು ಮಂಚನಬೆಲೆ ಜಲಾಶಯ ಸೇರುತ್ತಿದೆ. ನಂತರ ಅಲ್ಲಿಂದ ಹೊರಬರುತ್ತಿರುವ ನೀರೂ ಬಳಕೆಗೆ ಯೋಗ್ಯವಾಗಿಲ್ಲ. ಇದರ ಜತೆಗೆ ರಾಮನಗರ ಭಾಗದಲ್ಲಿಯೂ ಕಲುಷಿತ ವಸ್ತುಗಳು ನೀರನ್ನು ವಿಷವಾಗಿಸುತ್ತಿವೆ. ಇದೊಂದು ಎಚ್ಚರಿಕೆ ಗಂಟೆಯಾಗಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಸ್ಥಳಿಯವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net