ಹಣ್ಣಿನ ರಾಜನ ಮಂಡಿಯಲ್ಲಿ ಕಸದ್ದೇ ದರ್ಬಾರ್ ನಡೆಯುತ್ತಿಲ್ಲ ತ್ಯಾಜ್ಯ ವಿಲೇವಾರಿ

RMGM - Ph - 001 - Kasa-APMC- Mango Mandi Near- Ramanagara-23-5-2023
Published on

 ರಾಮನಗರ

ನಗರದ ಎಪಿಎಂಸಿ ವಾರುಕಟ್ಟೆಯ ಮಾವಿನಕಾಯಿ ಮಂಡಿ ಸಮೀಪ ಬೆಂಗಳೂರು-ಮೈಸೂರು ರಸ್ತೆ ಪಕ್ಕದಲ್ಲಿ ಕಸದ ರಾಶಿ ಹೆಚ್ಚುತ್ತಿದ್ದು ಕಸ ತೆರವುಗೊಳಿಸಿ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ರಾಮನಗರದ ಎಪಿಎಂಸಿಯಲ್ಲಿ ಪ್ರತಿನಿತ್ಯ ಕಸ ಹೆಚ್ಚಾಗಿಯೇ ಉತ್ಪತ್ತಿಯಾಗುತ್ತಿದೆ. ಬೆಂಗಳೂರು - ಮೈಸೂರು ರಸ್ತೆಯಿಂದ ಹನುಮಂತ ನಗರದ ಕಡೆ ಹೋಗುವ ರಸ್ತೆ ಪಕ್ಕದಲ್ಲಿ ಮಾವಿನಕಾಯಿ ಮಂಡಿ ಇರುವ ಸ್ಥಳದಲ್ಲಿ ಕಸದ ರಾಶಿ ದಿನೇದಿನೆ ಹೆಚ್ಚುತ್ತಿದೆ.

ಮಾರಾಟವಾಗದೆ ಉಳಿದ ಹಳೇ ಹೂವು, ಮಾರಾಟಕ್ಕೆ ತಂದ ಪ್ಲಾಸ್ಟಿಕ್ ಕವರ್, ನೀರಿನ ಪ್ಲಾಸ್ಟಿಕ್ ಖಾಲಿ ಬಾಟಲಿ, ಮಾರಾಟಕ್ಕೆ ಯೋಗ್ಯವಲ್ಲದ ಮಾವಿನಕಾಯಿ, ರೋಗಪೀಡಿತ ಮಾವಿನಕಾಯಿಗಳು, ಟ್ರ್ಯಾಕ್ಟರ್, ಟೆಂಪೋಗೆ ಮಾವಿನಕಾಯಿ ತುಂಬಲು ಬಳಸಿದ ತೆಂಗಿನಗರಿ, ಸೊಪ್ಪು, ಕಾಗದದ ಚೂರುಗಳು ಜತೆಗೆ ಮನೆ, ಅಂಗಡಿಗಳ ಕಸ, ಮತ್ತಿತರ ಕಸದ ಪದಾರ್ಥಗಳು ಕಸದ ರಾಶಿ ಸೇರುತ್ತಿವೆ. ಕಸದ ರಾಶಿ ಸೇರಿದ ಮಾವಿನಕಾಯಿಗಳು ಕೊಳೆತು ದುರ್ವಾಸನೆ ಬರುತ್ತಿದೆ. ಆಗಿಂದಾಗ್ಗೆ ಕಸ ತೆರವುಗೊಳಿಸದ ಪರಿಣಾಮ ಕಸದ ರಾಶಿ ಬೃಹತ್ತಾಗಿದೆ.

ಎಪಿಎಂಸಿ ಆವರಣದ ಕಾಂಪೌಂಡ್ ಸಮೀಪ ಅಲ್ಲಲ್ಲಿ ಕೊಳೆತ ಟೊಮ್ಯಾಟೊ ಹಾಗೂ ಮಾವಿನ ಕಾಯಿ ರಾಶಿಯೂ ಕಂಡುಬರುತ್ತಿದೆ. ಮಳೆ ಸುರಿಯುತ್ತಿರುವ ಕಾರಣ ಕಸ ಕೊಳೆತು ಕೆಸರಿನಂತಾಗಿ ರಸ್ತೆಯಲ್ಲಿ ಹರಡುತ್ತಿದೆ. ಇಡೀ ಎಪಿಎಂಸಿ ಕಾಂಪೌಂಡ್ ಪಕ್ಕ ಕಸದ ರಾಶಿ ಕಣ್ಣಿಗೆ ರಾಚುತ್ತಿವೆ.

ಹಾಳಾದ ಮಾವಿನಕಾಯಿಗಳನ್ನು ಕಸದ ಗುಡ್ಡೆಗೆ ಸುರಿಯುವ ಕಾರಣ ಮಾವಿನಕಾಯಿ ಬಹು ಬೇಗನೆ ಕೊಳೆತು ವಾಸನೆ ಬರುತ್ತಿರುವ ಜತೆಗೆ ನೊಣ, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಪ್ರತಿನಿತ್ಯ ನೂರಾರು ಜನ ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಹತ್ತಿರವೇ ಜನವಸತಿ ಪ್ರದೇಶ, ಮಂಡಿ ವರ್ತಕರ ಅಂಗಡಿಗಳು ಇವೆ. ಜನರ ಆರೋಗ್ಯ ಮತ್ತು ನಗರದ ಸೌಂದರ್ಯ ಕಾಪಾಡುವ ದೃಷ್ಟಿಯಿಂದ ನಗರಸಭೆ ಅಧಿಕಾರಿಗಳು ಕಸ ತೆರವುಗೊಳಿಸಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net