

ರಾಮನಗರ: ಸಣ್ಣ ಮಳೆಗೆ ಕೆರೆ, ಚರಂಡಿಯಂತೆ ಆಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಜನರ ಪಾಲಿಗೆ ಸಾವಿನ ಹೆಮ್ಮಾರಿ ಆಗಿದೆ. ಸರ್ವೀಸ್ ರಸ್ತೆ ಸೇರಿದಂತೆ ಎಲ್ಲ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ರಾಜ್ಯ, ಕೇಂದ್ರ ಸರ್ಕಾರಗಳನ್ನು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನೂತನ ಹೆದ್ದಾರಿಯಲ್ಲಿ ಸ್ಥಳೀಯ ಜನರು ಟೋಲ್ ರಹಿತವಾಗಿ ಭೂಮಿ ಕಳೆದುಕೊಂಡ ಸ್ಥಳೀಯರು ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಕಲಿಸಿಕೊಡಬೇಕು ಎಂದು ಆಗ್ರಹಪಡಿಸಿದ್ದಾರೆ.
ಡಬಲ್ ಎಂಜಿನ್ ರಾಜ್ಯ ಬಿಜೆಪಿ, ಕೇಂದ್ರ ಬಿಜೆಪಿ ಸರ್ಕಾರಗಳು, ಈ ರಸ್ತೆ ನಮ್ಮ ಹೆಮ್ಮೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ. ಬೆಳಗಿನಜಾವ ಸುರಿದ ಒಂದು ಸಣ್ಣಮಳೆಗೇ ಅದು ಕೆರೆಯಾಗಿ, ಚರಂಡಿಯಾಗಿ ಉಕ್ಕಿ ಹರಿದಿದೆ. ಹೆದ್ದಾರಿಗೆ ಎಕ್ಸ್ ಪ್ರೆಸ್ ಹೆಮ್ಮಾರಿ ಎಂದು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ವರ್ಷ ಅಬ್ಬರಿಸಿದ ಮಹಾಮಳೆಗೆ ಈ ಎಕ್ಸ್‌ಪ್ರೆಸ್ ಹೆದ್ದಾರಿ ತತ್ತರಿಸಿತ್ತು. ಕಾಮಗಾರಿಗಳು ಮುಗಿದಿರಲಿಲ್ಲ ಎಂದು ಹೇಳಿ ಗುತ್ತಿಗೆದಾರರು ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಈಗ ವರ್ಷ ಮುಗಿಯುವ ಮೊದಲೇ ಮತ್ತೆ ಬಂದ ಸಣ್ಣಮಳೆಗೆ ಸಾವಿರಾರು ಕೋಟಿ ವೆಚ್ಚದ ಈ ಹೆದ್ದಾರಿ ವಾಹನ ಸವಾರರ ಪಾಲಿಗೆ ಸಾವಿನಮಾರಿಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕವಾದ ಈ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆಯೇ, ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಿದ ಈ ಚುನಾವಣಾ ಗಿಮಕ್ ಬಗ್ಗೆ ಜನರು ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ. ವಾಹನ ಸವಾರರು ಶಪಿಸುತ್ತಿದ್ದಾರೆ. ಇದಕ್ಕೆ ಉತ್ತರದಾಯಿಗಳು ಯಾರು? ಎಂದು ಅನಿತಾ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
270 ರೂ. ಟೋಲ್ ಕಟ್ಟಿ ಹೆದ್ದಾರಿಗೆ ಬಂದ ವಾಹನ ಸವಾರರು ಮಳೆ ಚಳಿಯಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ನರಳಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ ಅವರು.
ಕೆಲ ದಿನಗಳ ಹಿಂದೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ವಾಹನದಲ್ಲಿದ್ದ ದಂಪತಿಯ ಹಣ, ಚಿನ್ನಾಭರಣವನ್ನು ದೋಚಿದ್ದ ಪ್ರಕರಣ ವರದಿಯಾಗಿತ್ತು. ಜತೆಗೆ, ನಿರಂತರ ಅಪಘಾತಗಳಿಂದ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗಾದರೆ, ಈ ಹೆದ್ದಾರಿಯ ಭದ್ರತೆ, ಸುರಕ್ಷತೆ ಪಾಡೇನು? ಟೋಲ್ ಸಂಗ್ರಹ ಮಾಡಿದರೆ ಸಾಕೇ? ಎಂದು ಅವರು ಕೇಳಿದ್ದಾರೆ.
ಸರ್ವಿಸ್ ರಸ್ತೆಯೂ ಸೇರಿದಂತೆ ಈ ಹೆದ್ದಾರಿಯ ಎಲ್ಲಾ ಬಾಕಿಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದುವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು. ಈ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರಾಮನಗರ, ಮಂಡ್ಯ ಸೇರಿ ಆ ಭಾಗದ ಎಲ್ಲ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಅನಿತಾ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.