

ವಿಜಯವಾಣಿ ಸುದ್ದಿಜಾಲ ರಾಮನಗರ
ಪ್ರಸ್ತುತ ರಾಜಕಾರಣ ಕಲುಷಿತಗೊಂಡಿದೆ. ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜಕಾರಣದಲ್ಲಿರುವ ಕಸ ಗುಡಿಸಿ ರಾಜಕಾರಣ ಶುದ್ಧೀಕರಿಸುವ ಕೆಲಸ ಮಾಡಲಿದೆ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಪೊರಕೆ ಹಿಡಿದು ಹೊರಟಿದ್ದೇವೆ. ಪೊರಕೆ ಕೇವಲ ಮನೆ, ಬೀದಿ ಗುಡಿಸುವುದಿಲ್ಲ, ರಾಜಕಾರಣವನ್ನೂ ಗುಡಿಸಿ ಶುದ್ಧ ಮಾಡುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಎಎಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಹತ್ತು ವರ್ಷಗಳಲ್ಲೇ ಎಎಪಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದಲ್ಲಿ ಅತ್ಯಂತ ವೇಗವಾಗಿ ಪಕ್ಷಕ್ಕೆ ಜನಬೆಂಬಲ ಸಿಗುತ್ತಿದೆ. ದೆಹಲಿಯಲ್ಲಿ ಮೂರು ಬಾರಿ ಅಧಿಕಾರ ಹಿಡಿದಿದೆ. ಪಂಜಾಬ್‌ನಲ್ಲಿ ಭಗವಂತ್ ಖೂಬ ನೇತೃತ್ವದಲ್ಲಿ ಒಂದು ವರ್ಷ ಪೂರೈಸಿದೆ. ಕರ್ನಾಟಕದಲ್ಲೂ ವಿಜಯ ಪತಾಕೆ ಹಾರಿಸಲು ಪಾರ್ಟಿ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.
ಕುತಂತ್ರ ನಡೆಸುತ್ತಿರುವ ಬಿಜೆಪಿ ನಮ್ಮ ಪಕ್ಷದ ಮಂತ್ರಿಗಳನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಪ್ರಧಾನಮಂತ್ರಿ ಅವರು 10 ನಿಮಿಷ ಬಂದು ಹೋಗುವ ಮೆರವಣಿಗೆಗೆ ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನೇ ಕಡಿದು ಹಾಳು ಮಾಡಿದ್ದಾರೆ. ಬಿಜೆಪಿ ಇನ್ಯಾವ ಭರವಸೆ, ಬೆಳಕು ನೀಡುತ್ತದೆ ಎಂದು ಟಾಂಗ್ ನೀಡಿದ ಮುಖ್ಯಮಂತ್ರಿ ಚಂದ್ರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ 4 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟ
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮುಖ್ಯಮಂತ್ರಿ ಚಂದ್ರು ಪ್ರಕಟಿಸಿದರು. ಚನ್ನಪಟ್ಟಣಕ್ಕೆ ಶರತ್‌ಚಂದ್ರ, ಮಾಗಡಿಗೆ ರವಿಕಿರಣ್, ಕನಕಪುರಕ್ಕೆ ಪುಟ್ಟರಾಜು, ರಾಮನಗರಕ್ಕೆ ನಂಜಪ್ಪ ಕಾಳೇಗೌಡ.
ಪಕ್ಷದ ಜಿಲ್ಲಾಧ್ಯಕ್ಷ ನಾಗೇಂದ್ರಗೌಡ ವಾತನಾಡಿದರು. , ರಾಜ್ಯ ಉಪಾಧ್ಯಕ್ಷ ಚನ್ನಪ್ಪ ನಲ್ಲೂರ್, ಮುಖಂಡರಾದ ನಂಜಪ್ಪ ಕಾಳೇಗೌಡ, ಸಿ.ಪಿ. ಶರತ್‌ಚಂದ್ರ, ಪುಟ್ಟರಾಜು, ರವಿಕಿರಣ್, ಆಸೀಫ್ ಮುಂತಾದವರಿದ್ದರು.