

ರಾಮನಗರ: ತಾಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ವೇಳೆಯಲ್ಲಿ ಕಿಡಿಗೇಡಿಗಳ ದುಸ್ಕೃತ್ಯದಿಂದ ಜಿ. ಉಮಾಮಹೇಶ್ವರಿ ಎಂಬುವರಿಗೆ ಸೇರಿದ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.
ಮಾವಿನ ತೋಟ ಗ್ರಾಮದ ಹೊರ ವಲಯದಲ್ಲಿ ಇರುವುದರಿಂದ ಕಿಡಿಗೇಡಿಗಳು ಸೋಮವಾರ ಸಂಜೆ ವೇಳೆಯಲ್ಲಿ ಬೆಂಕಿ ಹಚ್ಚಿರುವುದರಿಂದ ಜಮೀನಿನಲ್ಲಿ ಬೇರೆ ಬೇರೆ ಮರಗಳ ಒಣಗಿದ ಎಲೆಗಳು ಉದುರಿರುವ ಕಾರಣ ಬೆಂಕಿ ಆವರಿಸಿದೆ. ಸುಮಾರು 15ಕ್ಕೂ ಹೆಚ್ಚಿನ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.
ಮಾವಿನ ಮರಗಳಲ್ಲಿ ಈಗಾಗಲೇ ಹೂ ಬಿಟ್ಟು ಕಾಯಿಕಚ್ಚಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಬೇಕಾಗಿತ್ತು. ಅನೇಕ ವರ್ಷಗಳ ಕಾಲ ಮಾವಿನ ಮರಗಳನ್ನು ಪಾಲನೆ ಪೋಷಣೆ ಮಾಡಿ ಕಾಲಕಾಲಕ್ಕೆ ಅಗತ್ಯಗೊಬ್ಬರ, ನೀರು ನೀಡಿ ನಮ್ಮ ಮಕ್ಕಳಂತೆ ಹಾರೈಕೆ ಮಾಡಿದ್ದೇವು ಕಿಡಿಗೇಡಿಗಳ ಕೃತ್ಯದಿಂದ ನಾವು ಈಗ ಪರಿತಪಿಸುವಂತಾಗಿದೆ ಎಂದು ರೈತ ಮಹಿಳೆ ಉಮಾಮಹೇಶ್ವರಿ ಅಳಲು ತೋಡಿಕೊಂಡಿದ್ದಾರೆ.
ಕಿಡಿಗೇಡಿಗಳ ಕೃತ್ಯದಿಂದ ನಷ್ಟ ಹೊಂದಿರುವ ರೈತರಿಗೆ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯ ಪರಿಹಾರ ನೀಡಬೇಕು ಗ್ರಾಮಾಂತರ ಪೋಲೀಸರು ಕಿಡಿಗೇಡಿಗಳ ಬಗ್ಗೆ ನಿಗಾವಹಿಸಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಒತ್ತಾಯಿಸಿದ್ದಾರೆ.