

ಬೆಂಗಳೂರು:ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆ ಆದರ್ಶ ರಾಜಕಾರಣಿ. ಅವರಲ್ಲಿ ಹೃದಯ ಶ್ರೀಮಂತಿಕೆ ಇತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಜಯಂತಿ ನಿಮಿತ್ತ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಹೆಗಡೆ ಅವರು ನೂರಾರು ಯುವಕರನ್ನು ಬೆಳೆಸಿದ್ದಾರೆ. ಅವರು ಬೆಳೆಸಿದವರ ಪಟ್ಟಿಯಲ್ಲಿ ನಾನು ಇದ್ದೇನೆ. ಒಂದು ವೇಳೆ ಅವರು ಅವಕಾಶ ನೀಡದಿದ್ದರೆ ನಾನು ಪಾರ್ಲಿಮೆಂಟ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಮೊದಲ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿರುದ್ಧ ಸೋತೆ. ಸೋತರೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೆ. ವಿದ್ಯಾರ್ಥಿ ದಿಸೆಯಲ್ಲಿ ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದರು. ಆಮೇಲೆ, ಸತತ 8 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದರು.
ಹೆಗಡೆ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಲಿಲ್ಲ. ಧೀಮಂತ ರಾಜಕಾರಣಿ. ಅವರಿಗೆ ಬಹಳಷ್ಟು ತೊಂದರೆಯಾಗಿತ್ತು. ರಾಜಕೀಯದಲ್ಲಿ ಸತ್ಯ ನುಡಿದವರಿಗೆ ತೊಂದರೆಯಾಗುವುದು ಸಹಜ. ಅವರು ಒಳ್ಳೆಯ ಆಡಳಿತ ನೀಡಿದ್ದರು. ಅಂದಿನ ಅಧಿವೇಶನದಲ್ಲಿ ಘಟಾನುಘಟಿ ನಾಯಕರು ಇದ್ದರು. ಅವರನ್ನು ನೋಡುತ್ತಾ ನಾನು ರಾಜಕಾರಣದಲ್ಲಿ ಬೆಳೆದೆ. ಅವರು ಬದುಕಿನಲ್ಲಿ ಬಿಟ್ಟುಹೋದ ಆದರ್ಶ ಮತ್ತು ಸಾಕ್ಷಿಗುಡ್ಡೆಗಳು ಜೀವಂತವಾಗಿ ಉಳಿದಿದೆ. 3-4 ಬಾರಿ ಅವರನ್ನು ಭೇಟಿ ಮಾಡಿದ್ದೆ. ಹೆಗಡೆ ಹೆಸರನ್ನು ಶಾಶ್ವತವಾಗಿ ಉಳಿಸಲು ಪ್ರಯತ್ನಿಸುತ್ತೇನೆ ಎಂದು ಡಿಕೆಶಿ ಹೇಳಿದರು.
ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವೆ ರಾಣಿ ಸತೀಶ್, ಖ್ಯಾತ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ರಾಷ್ಟ್ರೀಯ ನವನಿರ್ಮಾಣ ವೇದಿಕೆ ಅಧ್ಯಕ್ಷೆ ಮಮತಾ ನಿಚ್ಚಾನಿ, ಪ್ರಧಾನ ಕಾರ್ಯದರ್ಶಿ ಡಾ.ಎಂ.ಪಿ. ನಾಡಗೌಡ ಸೇರಿ ನೂರಾರು ಮಂದಿ ಉಪಸ್ಥಿತರಿದ್ದರು.
ಕಸ ಮಾಫಿಯಾ ಬಲಿಷ್ಠ:
ಬೆಂಗಳೂರು ಜವಾಬ್ದಾರಿಯನ್ನು ಫ್ಯಾಷನ್ ಆಗಿ ತೆಗೆದುಕೊಂಡಿದ್ದೇನೆ. ನಗರದಲ್ಲಿ ಕಸ ಸೇರಿ ಇತರ ಜಟಿಲ ಸಮಸ್ಯೆಗಳನ್ನು ಯಾವ ಸರ್ಕಾರಗಳು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಕಸ ಮಾಫಿಯಾ ಇದೆ. ದಿನದಿಂದ ದಿನಕ್ಕೆ ನಗರ ಆಸ್ತಿ ಮೌಲ್ಯ ಹೆಚ್ಚಳವಾಗುತ್ತಿದೆ. ರಸ್ತೆ ವಿಸ್ತರಣೆಗೆ ಹೆಚ್ಚು ಹಣ ನೀಡಬೇಕಿದೆ. ಕೆಲವರು ಟೀಕೆ ಮಾಡಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರೆ ಮಾತ್ರ ಅಭಿವೃದ್ಧಿಯಾಗುತ್ತಿದೆ ಎಂದು ಡಿಕೆಶಿ ಹೇಳಿದರು.