ಸಿದ್ದರಾಮಯ್ಯ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ

Ram 2
Published on

ಮೈಸೂರು: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಸೋಮವಾರ ಶ್ರೀರಾಮಮಂದಿರ ಉದ್ಘಾಟನೆಗೊಂಡಿದ್ದು, ಭಕ್ತರಿಗೆ ಮುಕ್ತಗೊಳಿಸಲಾಗಿದೆ.ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಧಾರ್ಮಿಕ ವಿಧಿವಿಧಾನಗಳಿಗಷ್ಟೇ ಸೀಮಿತಗೊಳಿಸಲಾಯಿತು.

ಅತ್ಯಂತ ಸರಳವಾಗಿ ದೇವಸ್ಥಾನದ ಉದ್ಘಾಟನಾ ಕಾರ್ಯವನ್ನು ನೆರವೇರಿಸಲಾಯಿತು. ಸಿದ್ದರಾಮಯ್ಯ ಗೈರಾಗಿದ್ದರು. ಅವರ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಭಾಗಿಯಾದರು. ದೇವಸ್ಥಾನದ ಮೇಲಿನ ಕಳಶ ಹಾಗೂ ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ಮರು ಪ್ರತಿಷ್ಠಾಪಿಸಲಾಯಿತು. ದೇಗುಲದ ಒಳಾಂಗಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ. ಇದಕ್ಕಾಗಿ ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆಸಲಾಗಿತ್ತು.

ಶತಮಾನದಷ್ಟು ಪುರಾತನವಾದ ಈ ದೇವಸ್ಥಾನವನ್ನು ಸಿದ್ದರಾಮಯ್ಯ ಅವರ ಕುಟುಂಬದವರು ಗ್ರಾಮಸ್ಥರೊಂದಿಗೆ ಸೇರಿ ಜೀರ್ಣೋದ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬಹುದು. ಇದರಿಂದ ಕರೊನಾ ಮಾರ್ಗಸೂಚಿ ಪಾಲನೆ ಮಾಡುವುದು ಕಷ್ಟಕರವಾಗುತ್ತಿತ್ತು. ಹಾಗಾಗಿ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net