

ಚನ್ನಪಟ್ಟಣ: ರಾಮನೊಬ್ಬನೇ ದೇವರಲ್ಲ, ಕೋಟ್ಯಾಂತರ ದೇವತೆಗಳು ಈ ದೇಶವನ್ನು ರಕ್ಷಣೆ ಮಾಡುತ್ತಿವೆ. ಹಿಂದುತ್ವವನ್ನು ಹಾಗೂ ಭಾರತದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದರು.
ನಗರದಲ್ಲಿ ನಡೆದ ಜನ ಸಂಪರ್ಕ ಸಭೆಯ ವೇದಿಕೆಯಲ್ಲಿ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಎಂದರೆ, ಗ್ರಾಮಗಳ ಅಭಿವೃದ್ಧಿಯಾಗಬೇಕು, ರೈತರ ಅಭಿವೃದ್ಧಿಯಾಗಬೇಕು ಹಾಗೂ ಬಡಜನರ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದು ನಮ್ಮ ಸರ್ಕಾರದ ಕಾಳಜಿ. ಮೇಲೆ ಕುಳಿತುಕೊಂಡು (ಕೇಂದ್ರ ಸರ್ಕಾರ) ಭಾವನೆಗಳ ಆಧಾರದ ಮೇಲೆ ಅಲ್ಲ ಎಂದು ಟಾಂಗ್ ನೀಡಿದರು.
ತಾಲೂಕಿನ ದೇವಾಲಯಗಳ ಅಭಿವೃದ್ಧಿ ಬಗ್ಗೆ ಕೇಳಿಕೊಂಡಾಗ ಸಚಿವ ರಾಮಲಿಂಗರೆಡ್ಡಿಯವರು ಒಂದು ಕೋಟಿ ರೂ ಅನುದಾನ ಮಂಜೂರು ಮಾಡಿದ್ದಾರೆ. ದೇವಾಲಯ ಕಟ್ಟುವರು ನಾವು ಹಿಂದೂ ವಿರೋಧಿಗಳಾ? ನಾವು ಒಂದು ಕಡೆ ಅಲ್ಲ. ಇಡೀ ರಾಜ್ಯದೆಲ್ಲೆಡೆ ದೇವಾಲಯ ಕಟ್ಟುವ ವ್ಯವಸ್ಥೆ ರೂಪಿಸಿಕೊಂಡಿದ್ದೇವೆ. ದಿನ ಬೆಳಿಗ್ಗೆ ಎದ್ದರೆ ಎಲ್ಲರೂ ದೇವರನ್ನು ಪೂಜಿಸುತ್ತೇವೆ. ಆದರೆ, ರಾಮನೊಬ್ಬ ದೇವರಲ್ಲ ಎಂದು ಪರೋಕ್ಷವಾಗಿ ರಾಮಮಂದಿರ ವಿಚಾರದ ಬಗ್ಗೆ ಸೂಕ್ಷ್ಮವಾಗಿ ಮಾತನಾಡಿದರು.