ರಾಣೆಬೆನ್ನೂರಿನಲ್ಲೇ ರಾಮಮಂದಿರ!

15-RNR-03- Rama mandir
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಉತ್ತರ ಪ್ರದೇಶದ ಅಯೋಧ್ಯೆ ಶ್ರೀ ರಾಮನ ಮಂದಿರ ರಾಣೆಬೆನ್ನೂರ ನಗರದಲ್ಲಿಯೆ ಸಿದ್ಧವಾಗುತ್ತಿದೆ…!
ಹೌದು ಪ್ರತಿ ವರ್ಷ ಹೊಸ ಪ್ರಯತ್ನದಿಂದಲೇ ಗುರುತಿಸಿಕೊಂಡಿರುವ ರಾಣೆಬೆನ್ನೂರ ಕಾ ರಾಜಾ ಗಣಪತಿ ತಂಡದವರು ಈ ಬಾರಿ ಅಯೋಧ್ಯೆ ರಾಮಮಂದಿರ ಪರಿಕಲ್ಪನೆಯನ್ನು ಜನತೆ ಮುಂದಿಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ 15ನೇ ವರ್ಷದ ಗಣೇಶೋತ್ಸವ ನಿಮಿತ್ತ ಹಾಗೂ ಜನವೇರಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಈ ಪರಿಕಲ್ಪನೆ ಸಿದ್ಧಪಡಿಸಲಾಗುತ್ತಿದೆ.

ಶ್ರೀರಾಮ ಹಾಗೂ ಮಂದಿರದ ಸಮಗ್ರ ಮಾಹಿತಿ: ಶ್ರೀ ರಾಮ ಜನಿಸಿದ ಸಮಯದಿಂದ ಜೀವ ತ್ಯಾಗ ಮಾಡುವ ಕೊನೆಯ ಗಳಿಗೆಯವರೆಗೂ ಪ್ರಮುಖ ಘಟನೆಗಳನ್ನು ಬಿಂಬಿಸುವ ಪರಿಕಲ್ಪನೆಯನ್ನು ಕಲಾಕೃತಿಗಳ ಮೂಲಕ ಪ್ರದರ್ಶಿಸಲು ಸಿದ್ಧಪಡಿಸಲಾಗುತ್ತಿದೆ. ವಿಕ್ರಮಾದಿತ್ಯ 12ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಾನೆ. ಅಲ್ಲಿಂದ ಹಿಡಿದು ಈವರೆಗೂ ಅಯೋಧ್ಯೆಯಲ್ಲಿ ರಾಮ ಮಂದಿರದ ಕುರಿತು ಎಲ್ಲ ಘಟನಾವಳಿಗಳನ್ನು ಗೋಡೆ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಇದನ್ನು ನೋಡಿದ ಪ್ರತಿಯೊಬ್ಬರಿಗೂ ರಾಮ ಮಂದಿರದ ಸಮಗ್ರ ಚಿತ್ರಣ ಕಣ್ಮುಂದೆ ಬರಲಿದೆ.
ಅಲ್ಲದೆ ಶ್ರೀರಾಮ ಮಂದಿರದ ವಿಚಾರದಲ್ಲಿ ರಾಜೀವಗಾಂಧಿ ಪಾತ್ರ, ಟಿ.ವಿ. ನರಸಿಂಹಮೂರ್ತಿ ಪಾತ್ರ, ಅಟಲ್ ಬಿಹಾರಿ ವಾಜಪೇಯಿಯಿಂದ ಹಿಡಿದು ಈವರೆಗೂ ಯಾರ್ಯಾರು ಏನೇನು ಹೋರಾಟ ಮಾಡಿದ್ದಾರೆ ಎನ್ನುವ ಕುರಿತು ಪಠ್ಯಪುಸ್ತಕದಲ್ಲಿ ದೊರೆಯುವ ಮಾಹಿತಿಗಿಂತಲೂ ರಸವತ್ತಾಗಿ ದೃಶ್ಯಗಳ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪರಿಕಲ್ಪನೆ ಸಿದ್ಧಪಡಿಸಲಾಗುತ್ತಿದೆ.
ಎಲ್ಲರೂ ನೋಡಲಿ ಎಂಬ ಉದ್ದೇಶ: ಶ್ರೀ ರಾಮನ ಮಂದಿರ ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿದೆ. ಅಲ್ಲಿಗೆ ಹೋಗಿ ಎಲ್ಲರೂ ನೋಡಲು ಆಗುವುದಿಲ್ಲ. ಆದ್ದರಿಂದ ರಾಣೆಬೆನ್ನೂರ ಮಾತ್ರವಲ್ಲದೆ ಹಾವೇರಿ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಭಾಗದಿಂದಲೂ ರಾಣೆಬೆನ್ನೂರ ಕಾ ರಾಜಾ ಗಣಪತಿ ನೋಡಲು ಬರುತ್ತಾರೆ. ಅಂಥ ಬಡವರು ಸೇರಿ ಎಲ್ಲರಿಗೂ ಅಯೋಧ್ಯೆಯಲ್ಲಿರುವ ಶ್ರೀ ರಾಮನ ಮಂದಿರ ಹೇಗೆ ಇದೆಯೋ ಅದನ್ನು ಇಲ್ಲಿಗೆ ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ.
ಅದಕ್ಕಾಗಿ ನಾವೇ ಸ್ವತಃ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಚಿತ್ರಣ ಸಂಪೂರ್ಣ ಭಾವಚಿತ್ರ ತೆಗೆದುಕೊಂಡು ಹಾಗೂ ರಾಮ ಮಂದಿರದ ನಿರ್ಮಾಣ ಮಾಡುತ್ತಿರುವ ಗೋಪಾಲಜಿಯವರ ಸಲಹೆ ಪಡೆದುಕೊಂಡು ಬಂದು ಶೇ. 70ರಷ್ಟು ಭಾಗ ಶ್ರೀ ರಾಮ ಮಂದಿರದ ಮಾದರಿಯಲ್ಲೇ ದೇವಸ್ಥಾನ ನಿರ್ವಿುಸಲಾಗುತ್ತಿದೆ.ಅದಕ್ಕಾಗಿ ಶಿವಮೊಗ್ಗದ ಕಲಾವಿದ ಇಂಧುಕುಮಾರ ನೇತೃತ್ವದಲ್ಲಿ 40 ಜನರ ತಂಡ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ವಿಜಯವಾಣಿ ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಸೆ. 19ರಂದು ಪ್ರತಿಷ್ಠಾಪನೆ…
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ಇಡಗುಂಜಿ ಗಣಪತಿ ದೇವಸ್ಥಾನದ ಮಾರ್ಗದರ್ಶನದಂತೆ ಸೆ. 19ರಂದು ರಾಣೆಬೆನ್ನೂರ ಕಾ ರಾಜಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ಸಂಜೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಭಕ್ತರು ಕುಟುಂಬ ಸಮೇತ ಬಂದು ಗಣಪತಿ ದರ್ಶನ ಪಡೆದು ಶ್ರೀರಾಮನ ಚರಿತ್ರೆ ಕುರಿತು ತಿಳಿದುಕೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಹುಚ್ಚಪ್ಪ ಮೇಡ್ಲೇರಿ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ ಹಾಗೂ ಕಲಾವಿದ ಇಂಧುಕುಮಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಡವರು, ಯುವಪೀಳಿಗೆ, ಶಾಲಾ-ಮಕ್ಕಳು, ಮಹಿಳೆಯರು ಸೇರಿ ಈ ಭಾಗದ ಎಲ್ಲ ಜನತೆ ಶ್ರೀ ರಾಮ ಮಂದಿರದ ದರ್ಶನ ಮಾಡಬೇಕು. ಶ್ರೀರಾಮನ ಚರಿತ್ರೆಯನ್ನು ಚಿತ್ರಾವಳಿ ಮೂಲಕ ತಿಳಿಸಬೇಕು ಎಂಬ ಉದ್ದೇಶದಿಂದ ಈ ಬಾರಿ ಶ್ರೀ ರಾಮ ಮಂದಿರದ ಪರಿಕಲ್ಪನೆ ಮೂಲಕ ಗಣೇಶೋತ್ಸವ ಆಚರಿಸಲಾಗುತ್ತಿದೆ. | ಪ್ರಕಾಶ ಬುರಡಿಕಟ್ಟಿ, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net