ರಾಮ ಮಂದಿರ ಮುಂದಿನ ವರ್ಷ ಲೋಕಾರ್ಪಣೆ: ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿಕೆ

Ram Mandir, Gurpeeth, Century, Dream,
Published on

ಹೊಸದುರ್ಗ: ಸಮಸ್ತ ಹಿಂದೂಗಳ ಶತಮಾನಗಳ ಕನಸು ನನಸಾಗುವ ಕಾಲ ಹತ್ತಿರವಾಗಿದ್ದು ಅಯೋಧ್ಯೆಯ ಶ್ರೀ ರಾಮಮಂದಿರ 2024ರ ಮಕರ ಸಂಕ್ರಾಂತಿ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಸಂಸ್ಥಾನ ಮಠದಲ್ಲಿ ಮಂಗಳವಾರ ಮೃತ್ತಿಕೆ ಸಮರ್ಪಣೆಗಾಗಿ ವಿವಿಧ ಮಠಾಧೀಶರು ಅಯೋಧ್ಯೆಗೆ ಭೇಟಿ ನೀಡಿದ ಕುರಿತು ಮಾಹಿತಿ ನೀಡಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಹನುಮನ ಜನ್ಮ ಭೂಮಿ ಕಿಷ್ಕಿಂದೆ ಸೇರಿ ರಾಜ್ಯದ ವಿವಿಧ ಹನುಮ ಮಂದಿರಗಳನ್ನು ಸ್ವಚ್ಛಗೊಳಿಸಿ, ಅಲ್ಲಿನ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಮರ್ಪಿಸಲಾಯಿತು ಎಂದು ತಿಳಿಸಿದರು.

ರಾಮಮಂದಿರದ ಕಾಮಗಾರಿ ವೀಕ್ಷಿಸಲು ಭೇಟಿ ನೀಡಿದ ರಾಜ್ಯದ ಮೊದಲ ಮಠಾಧೀಶರ ತಂಡಕ್ಕೆ ಮಂದಿರದ ನಿರ್ಮಾಣದ ಉಸ್ತುವಾರಿ ವಹಿಸಿರುವ ಗೋಪಾಲ ಜೀ, ನಿರ್ಮಾಣದ ಸಂಪೂರ್ಣ ವಿವರ ನೀಡಿದರು. ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೇತೃತ್ವ ವಹಿಸಿದ್ದರು. ನಂತರ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ಕಾಶಿ ಕಾರಿಡಾರ್ ಕಾಮಗಾರಿ ವೀಕ್ಷಿಸಲಾಯಿತು ಎಂದರು.

ಮಠಾಧೀಶರ ತಂಡದಲ್ಲಿ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ನಾರಾಯಣ ಗುರುಪೀಠದ ರೇಣುಕಾನಂದ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಬಸವಕಲ್ಯಾಣದ ಶಿವಾನಂದ ಸ್ವಾಮೀಜಿ, ಬೆಂಗಳೂರಿನ ರಾಮಾನುಜ ಮಠದ ತ್ರಿದಂಡಿ ವೆಂಕಟರಾಮಾನುಜ ಸ್ವಾಮೀಜಿ ಸೇರಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net