

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ವಿಶ್ವದ ಧರ್ಮಚಾವಡಿ ಭಾರತ. ಭಾರತದ ಧರ್ಮದ ಬೀಡು ತುಳುನಾಡು. ಆದ್ದರಿಂದಲೇ ತುಳುನಾಡಿನಲ್ಲಿ ಧಾರ್ಮಿಕ ಕಾರ್ಯಕ್ರಮ ನಿರಂತರ ನಡೆಯುತ್ತಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಮಂಗಳವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಧರ್ಮವನ್ನು ಮೆಟ್ಟಿ ನಿಲ್ಲಲು ಧರ್ಮ ಅವಿರ್ಭಸಿದೆ. ದ್ವಾಪರ ಕಾಲದಲ್ಲಿ ಒಂದೇ ಕುಟುಂಬದಲ್ಲಿ ಒಳ್ಳೆಯದು-ಕೆಟ್ಟದು ಇದ್ದರೆ ಕಲಿಯುಗದಲ್ಲಿ ಒಂದೇ ವ್ಯಕ್ತಿಯಲ್ಲಿ ಒಳ್ಳೆಯದು-ಕೆಟ್ಟದ್ದು ತುಂಬಿಕೊಂಡಿದೆ. ಪ್ರತಿಯೊಬ್ಬರೂ ಅಂತರಂಗದಿಂದ ಜಾಗೃತರಾಗಬೇಕಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದರು. ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಸಹರಿಸಿದವರನ್ನು, ಮಾಜಿ ಅಧ್ಯಕ್ಷರು, ಅರ್ಚಕರು, ಸಿಬ್ಬಂದಿ, ಸೇವಾ ಸಮಿತಿ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಗೌರವಿಸಲಾಯಿತು. ಪುರಸಭಾಧ್ಯಕ್ಷ ವಾಸು ಪೂಜಾರಿ, ಸೇವಾ ಸಮಿತಿ ಕೋಶಾಧಿಕಾರಿ ಬಿ.ಮೋಹನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ, ಗುರುಕೃಪಾ ಕೋಶಾಧಿಕಾರಿ ಕೆ.ನಾರಾಯಣ ಹೆಗ್ಡೆ, ಸಹ ಕೋಶಾಧಿಕಾರಿ ವಸಂತ ರಾವ್ ಉಪಸ್ಥಿತರಿದ್ದರು. ಸೇವಾ ಸಮಿತಿ ಸದಸ್ಯ ಎಂ.ಅಶ್ವನಿ ಕುಮಾರ್ ರೈ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಭಕ್ತರು, ಭಕ್ತರಿಂದ ಭಕ್ತಿಗಾಗಿ ನಿರ್ಮಾಣಗೊಂಡ ದೇವಸ್ಥಾನ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನವಾಗಿದೆ. ಭಕ್ತಿಗೆ ವ್ಯಾಪ್ತಿಯ ಮಿತಿಯಿಲ್ಲ. ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ದೇವರನ್ನು ಪೂಜಿಸಬಹುದು. ಕಲ್ಲು, ಮರವನ್ನು ಆರಾಧಿಸಬಹುದು. ಅದೆಲ್ಲವೂ ಅವರವರ ಭಕ್ತಿಗೆ ಸಂಬಂಧಪಟ್ಟದ್ದು. ಏರ್ಮಾಳ್ ಕಲ್ಪನಾ ಚಂದ್ರಶೇಖರ್ ವಕೀಲೆ